ಜಾತಿಗಣತಿ ವರದಿ ಬಿಡುಗಡೆಗೆ ಉಗ್ರಪ್ಪ ಒತ್ತಾಯ

6 (1)
Published on

ಮೈಸೂರು: ರಾಜ್ಯದಲ್ಲಿ 2015ರಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ರಾಜ್ಯದಲ್ಲಿ 2015ರಲ್ಲಿ ನಡೆಸಿದ ಈ ಸಮೀಕ್ಷೆಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲು ಸಹಕಾರಿಯಾಗುತ್ತದೆ. ಸಮಸಮಾಜ ಕಟ್ಟಲು ಮತ್ತು ರಾಜ್ಯದ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದರು.


ಸಮಸಮಾಜ ನಿರ್ಮಾಣ, ರಾಜ್ಯಧರ್ಮ ಪಾಲನೆ ಮತ್ತು ಸಂವಿಧಾನಬದ್ಧ ಆಡಳಿತ ಕೊಟ್ಟ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಆಧುನಿಕ ರಾಜರ್ಷಿ ಎಂದು ಬಣ್ಣಿಸಿದರು.


ಭೂ ಸುಧಾರಣೆ ಕಾಯ್ದೆಯಿಂದ 8 ಲಕ್ಷ ಕುಟುಂಬಗಳಿಗೆ ಭೂಮಿ, ಋಣಮುಕ್ತ ಕಾಯ್ದೆಯಿಂದ ಜೀತಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ಧತಿ ನಿಷೇಧ, ಜನತಾ ಮನೆಗಳ ಹಂಚಿಕೆ, ಪ್ರತಿ ಮನೆಗೂ ವಿದ್ಯುತ್, ಪರಿಶಿಷ್ಟರಿಗೆ ವಿದ್ಯಾರ್ಥಿ ನಿಲಯಗಳ ನಿರ್ಮಾಣ, ನಿರುದ್ಯೋಗಿಗಳಿಗೆ ಉದ್ಯೋಗ, ಕರ್ನಾಟಕ ನಾಮಕರಣ, ನೀರಾವರಿಗೆ ಒತ್ತು ಕೊಟ್ಟ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.


ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಕಮಿಷನ್ ಮೂಲಕ ಸಾಮಾಜಿಕ ನ್ಯಾಯಕ್ಕೆ ಹೊಸ ಮನ್ವಂತರ ಬರೆದರು. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಲು ಹಾವನೂರ ಆಯೋಗ ರಚಿಸಿದರು. ಕಾಂತರಾಜು ಆಯೋಗದ ಮೂಲಕ ಸಿದ್ದರಾಮಯ್ಯ ಆ ಪರಂಪರೆಯನ್ನು ಮುಂದುವರಿಸಿದರು. ಸಾಮಾಜಿಕ ನ್ಯಾಯದ ಪರವಾಗಿರುವ ನಾಯಕರನ್ನು ಕೊಟ್ಟ ಮೈಸೂರು ಪುಣ್ಯಭೂಮಿ ಎಂದರು.


1969ರಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಪಕ್ಷದ ಚುಕ್ಕಾಣಿ ಹಿಡಿದ ದೇವರಾಜ ಅರಸು 1971ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28ರಲ್ಲಿ 27 ಸ್ಥಾನ ಗೆಲ್ಲಿಸಿದ್ದರು. 1972ರ ವಿಧಾನಸಭೆ ಚುನಾವಣೆಯಲ್ಲಿ 165 ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಸಿದ್ದರಾಮಯ್ಯ ಅವರು ಅರಸು ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದರು.


ಮಾಜಿ ಶಾಸಕ ಎಂ. ಶ್ರೀನಿವಾಸಯ್ಯ ಮಾತನಾಡಿ, ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನನ್ನೇ ಭೂಮಿಯ ಒಡೆಯನನ್ನಾಗಿ ಮಾಡಿದವರು ದೇವರಾಜ ಅರಸು. ಇಡೀ ದೇಶದಲ್ಲಿ ಯಾರೂ ಮಾಡದಂತಹ ಕೆಲಸವನ್ನು ಅರಸು ಮಾಡಿದರು. ಪಕ್ಷಾತೀತವಾಗಿ ಯಾರಿಗೂ ಹಾನಿಯಾಗದ ರೀತಿಯಲ್ಲಿ ಈ ನಾಡಿನ ಜನರಿಗೆ ಭೂಮಿ ಹಂಚಿದರು. ನ್ಯಾಯಾಲಯಕ್ಕೂ ಹೋಗಲು ಅವಕಾಶ ಇಲ್ಲದಂತೆ ಕಾಯ್ದೆ ರೂಪಿಸಿದರು ಎಂದರು.


ವಿಶ್ರಾಂತ ಕುಲಪತಿ ಪ್ರೊ.ನಿರಂಜನ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನಗರಾಧ್ಯಕ್ಷ ಆರ್.ನಾಗೇಶ್, ಮುಖಂಡರಾದ ಚಂದ್ರಮೌಳಿ, ಎಂ.ಶಿವಣ್ಣ, ಪುಷ್ಪಾಲತಾ ಚಿಕ್ಕಣ್ಣ, ಮೋದಾಮಣಿ, ಲತಾ ಸಿದ್ದಶೆಟ್ಟಿ, ಟಿ.ಬಿ.ಚಿಕ್ಕಣ್ಣ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net