ಜಾತಿಗಣತಿ ವರದಿ ಜಾರಿ ಮಾಡದಿದ್ದರೆ ಆಂದೋಲನ ಆರಂಭ, ಕಾಂಗ್ರೆಸ್ ಮುಖಂಡ ರಾಜು ಆಲಗೂರ ಹೇಳಿಕೆ

Published on

ವಿಜಯಪುರ: ಜಾತಿಗಣತಿ ವರದಿ ಬೇಗ ಸಂಪುಟ ಸಮಿತಿ ಮುಂದೆ ಇರಿಸಿ ಆದಷ್ಟು ಬೇಗ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಆಂದೋಲನ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ರಾಜು ಆಲಗೂರ ಆಗ್ರಹಿಸಿದರು.

ರಾಜ್ಯದಲ್ಲಿರುವ ಎಲ್ಲ‌ಜಾತಿಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಅರಿಯಲು ಹಿಂದಿನ ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ನಡೆಸಿತು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಗಡೆಯಾಗಲಿಲ್ಲ. ಇದೀಗ ನಮ್ಮದೇ ಸರ್ಕಾರ ಇದ್ದು ತ್ವರಿತವಾಗಿ ಬಿಡುಗಡೆ ಮಾಡಲು ಒತ್ತಾಯಿಸುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ಈಗ ವರದಿ ಮಂಡನೆಯಾಗಿದೆ. ಹೀಗಾಗಿ ಬೇಗ ಅನುಷ್ಟಾನಗೊಳ್ಳಲಿ ಎಂದ ಆಲಗೂರ, ಬೆರಳೆಣಿಕೆ ಸಮುದಾಯಗಳು ಎಲ್ಲ ರೀತಿಯ ಅನುಕೂಲತೆ ಪಡೆದಿವೆ. ಬಹುಸಂಖ್ಯಾತ ಹಿಂದುಳಿದ, ಅಲ್ಪಸಂಖ್ಯಾತ ಜನರಿಗೆ ಬಹಳ ಕಡಿಮೆ ಅವಕಾಶಗಳು ಸಿಕ್ಕಿವೆ ಎಂದರು.

ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅಂಥವರು ಅವಕಾಶ ಪಡೆದಿರಬಹುದು. ಆದರೆ ಇನ್ನುಳಿದವರಿಗೆ ಆ ಅವಕಾಶ ಸಿಕ್ಕಿಲ್ಲ. ಆ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಅವಕಾಶಗಳು ಸಿಗಬೇಕಿದೆ. ಈ ಕೂಗು ಎಲ್ಲ ಪ್ರಗತಿಪರ ಸಂಘಟನೆಗಳಿಂದ ಕೇಳಿ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಮತ್ತು ಭರವಸೆ ಇದ್ದು, ಆದಷ್ಟು ಬೇಗ ಅನುಷ್ಟಾನಕ್ಕೆ ಬರಲಿದೆ ಎಂದರು.

ಜಾತಿಗಣತಿ ಬಿಡುಗಡೆ ಮಾಡಬಾರದು ಎಂದು ಅನೇಕರು ವಿರೋಧ ಮಾಡುತ್ತಿದ್ದಾರೆ. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಸಮುದಾಯಗಳ ಸಮೀಕ್ಷೆ ಆಗಿದೆ. ಆ ಬಗ್ಗೆಯೂ ಈ ವರದಿಯಲ್ಲಿದೆ ಎಂದು ಭಾವಿಸಿದ್ದೇನೆ. ಬಿಡುಗಡೆಯಾದರೆ ಆ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಲಿದೆ ಎಂದರು.

ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದುವರೆದವರು ಜಾತಿಗಣತಿ ವರದಿ ಬಿಡುಗಡೆಗೊಳಿಸಬಾರದು ಎಂಬ ಹುನ್ನಾರ ನಡೆಸಿದ್ದಾರೆ. ಬ್ರಾಹ್ಮಣ ಸಹಿತ ಅನೇಕ ಮೇಲ್ವರ್ಗಗಳಲ್ಲಿಯೂ ಬಡವರಿದ್ದಾರೆ. ಅವರಿಗೂ ಅನುಕೂಲವಾಗಬೇಕೆಂಬ ಕಾರಣಕ್ಕೆ ಜಾತಿಗಣತಿ ವರದಿ ಬಿಡುಗಡೆ ಅವಶ್ಯಕತೆ ಇದೆ ಎಂದರು.

ಅನೇಕ ಜಾತಿಗಳು ರಾಜಕೀಯವಾಗಿ ಗುರುತಿಸಿಕೊಳ್ಳಲಾಗಿಲ್ಲ. ಹೀಗಾಗಿ ಸರ್ವರಿಗೂ ಅವಕಾಶ ಸಿಗಬೇಕಾದರೆ ಜಾತಿಗಣತಿ ವರದಿ ಬಿಡುಗಡೆಯಾಗಬೇಕು. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಜಾರಿಗೆ ತರುವ ವಿಶ್ವಾಸ ಇದೆ. ಆಕಸ್ಮಿಕವಾಗಿ ಚರ್ಚೆಯಾಗದೇ ಹೋದರೆ ರಾಜ್ಯದಲ್ಲಿ ಆಂದೋಲನ ಆರಂಭಗೊಳ್ಳಲಿದೆ ಎಂದರು.

ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದವರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಾತಿಗಣತಿಯ ಅವಶ್ಯಕತೆ ಇದೆ ಎಂದರು.

ಡಾ.ಗಂಗಾಧರ ಸಂಬಣ್ಣಿ, ಸುರೇಶ ಘೊಣಸಗಿ, ಚಂದ್ರಶೇಖರ ಕೊಡಬಾಗಿ, ಮಹ್ಮದ್ ರಫೀಲ್ ಟಪಾಲ್, ಸಾಹೇಬಗೌಡ ಬಿರಾದಾರ, ಕೃಷ್ಣಾ ಅಣಚಿ, ವಸಂತ ಹೊನಮೊಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net