

ಕಲಬುರಗಿ: ಕಾಂತರಾಜು ನೇತೃತ್ವದ ಸಮಿತಿ ವರದಿ ಆಧರಿಸಿ ರಾಜ್ಯ ಸರ್ಕಾರ ಜಾತಿ ಜನಗಣತಿಗೆ ಮುಂದಾಗಿರುವುದಕ್ಕೆ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ತಿಳಿಸಿದ್ದಾರೆ. ೧೦ ವರ್ಷ ಹಿಂದಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಹಲವು ಲೋಪಗಳಿಂದ ಕೂಡಿದ್ದು, ಸರಿಪಡಿಸುವ ಅಗತ್ಯವಿದೆ. ವೀರಶೈವ-ಲಿಂಗಾಯತ ಎಲ್ಲ ಉಪಪಂಗಡಗಳನ್ನು ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಶಿಫಾರಸು ಮಾಡಬೇಕು. ಹೀಗಾದರೆ ಸಾಮಾಜಿಕ ಅಸಮಾನತೆಯ ನಿರಾಕರಣೆ ಮತ್ತು ಸಾಮಾಜಿಕ ನ್ಯಾಯ ಕುರಿತ ಸರ್ಕಾರದ ಎಲ್ಲ ಪ್ರಕ್ರಿಯೆಗಳಿಗೆ ಸಮುದಾಯ ಬೆಂಬಲಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.