

ಚಾಮರಾಜನಗರ: ರಾಜ್ಯ ಸರ್ಕಾರವು ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಶೀಘ್ರ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಯರಿಯೂರು ರಾಜಣ್ಣ ಮಾತನಾಡಿ, ರಾಜ್ಯದ ಜನಸಂಖ್ಯೆಯ ಬಹುಭಾಗವಾಗಿರುವ ಆದಿವಾಸಿಗಳು, ಅಲೆಮಾರಿಗಳು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಇತರೆ ಶೋಷಿತ ಸಮುದಾಯಗಳು ಹಲವು ದಶಕಗಳಿಂದಲೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತ ಬಂದಿವೆ. ಜಾತಿ ಗಣತಿ ವರದಿ ಸ್ವೀಕಾರಗೊಂಡ ಕೂಡಲೇ ಕೆಲವು ಪಟ್ಟಭದ್ರ ಜಾತಿವಾದಿ ವ್ಯಕ್ತಿ ಹಾಗೂ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ತೀವ್ರ ಅಸಮಾಧಾನ ಹೊರ ಹಾಕಿ ವಿರೋಧ ವ್ಯಕ್ತಪಡಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ಪಟ್ಟಭದ್ರ ಜಾತಿವಾದಿಗಳು ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ ಎಂದರು.
ಜಾತಿ ಗಣತಿ ವರದಿಯ ಅಂಕಿ ಅಂಶಗಳ ಪ್ರಕಾರ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಈಗಿರುವ ಶೇ.50 ರಷ್ಟು ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಮಿತಿಯ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಳ ಮಾಡಲು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಸಾಮಾಜಿಕ ನ್ಯಾಯದ ಪರಂಪರೆಯನ್ನು ಸರ್ಕಾರ ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಕೆ.ಎಂ.ನಾಗರಾಜ್, ಕಂದಹಳ್ಳಿ ನಾರಾಯಣ, ರಾಮಸಮುದ್ರ ಸುರೇಶ್, ಸಮಿತಿಯ ಪದಾಧಿಕಾರಿಗಳಾದ ನಂಜುಂಡಸ್ವಾಮಿ, ಅನಿಲ್ ಕುಮಾರ್, ಶಿವಕುಮಾರ್, ರಂಗಸ್ವಾಮಿ, ಚಂದ್ರಶೇಖರ್, ಶಾಂತರಾಜು, ಧರಣೇಂದ್ರ ಹಾಗೂ ಇತರರು ಭಾಗವಹಿಸಿದ್ದರು.