

ಹಾಸನ: ಹಾಲಿ ನಡೆಯುತ್ತಿರುವ ಎಸ್ಸಿ ಜಾತಿ ಸಮೀಕ್ಷೆಯಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ಸರಿಪಡಿಸಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮುಖಂಡ ಕೃಷ್ಣದಾಸ್ ಮನವಿ ಮಾಡಿದರು.
ನ್ಯಾ. ಎಚ್.ಎನ್. ನಾಗಮೋಹನ ದಾಸ್ ನೇತೃತ್ವದ ಆಯೋಗ ರಾಜ್ಯಾದ್ಯಂತ ಗಣತಿದಾರರನ್ನು ನೇಮಿಸಿಕೊಂಡು ಎಸ್ ಸಿ ಪಟ್ಟಿಯಲ್ಲಿರುವ 101 ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಮಾಡುತ್ತಿದೆ. ಈವರೆಗೆ 20 ದಿನಗಳ ಕಾಲ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಗಣತಿದಾರರು ಹಾಗೂ ಎಸ್ ಸಿ, ಎಸ್ಟಿ ಕುಟುಂಬಗಳ ನಡುವೆ ಸರಿಯಾದ ಹೊಂದಾಣಿಕೆಯಾಗದೆ ಗೊಂದಲ ಉಂಟಾಗಿದೆ. ಈ ಸಮೀಕ್ಷೆ ಸಂದರ್ಭದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ನಮ್ಮ ಸಮಿತಿಯಿಂದ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಗ್ಗೆ ಸ್ಪಂದಿಸಿದ ಆಯೋಗ ಸಮೀಕ್ಷೆ ಕಾರ್ಯದ ದಿನಾಂಕವನ್ನು ವಿಸ್ತರಿಸಿ ಜೂನ್ ಒಂದನೇ ತಾರೀಕಿಗೆ ಸಮೀಕ್ಷೆ ಕಾರ್ಯಗಳು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಆದರೆ ಈ ಸಮೀಕ್ಷೆ ಕಾರ್ಯ ಗಣತಿದಾರರ ಬೇಜವಾಬ್ದಾರಿಯಿಂದಾಗಿ ವಿಫಲಗೊಳ್ಳುವ ಆತಂಕ ಎದುರಾಗಿದೆ. ಈ ಬಗ್ಗೆ ಹಾಸನದ ಜಿಲ್ಲಾಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಮೇ 28ರಂದು ದಲಿತ ಸಂಘಟನೆಗಳ ಮುಖಂಡರ ಸಭೆ ಕರೆದು ಸುದೀರ್ಘ ಚರ್ಚೆ ಮಾಡಿ ಸಮೀಕ್ಷೆ ಕಾರ್ಯದಲ್ಲಿ ಆಗುತ್ತಿರುವ ಗೊಂದಲಗಳನ್ನು ಗಂಭೀರವಾಗಿ ಆಲಿಸಿದರು. ಈ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು ಎಂದರು.
ಸಮೀಕ್ಷೆ ಕಾರ್ಯದಲ್ಲಿ ಆಯೋಗದ ನಿರ್ದೇಶನದಂತೆ ಸುಮಾರು 42 ಪ್ರಶ್ನಾವಳಿಗಳನ್ನು ಕೇಳಲಾಗುತ್ತಿದ್ದು, ಗಣತಿದಾರರು ಕೇವಲ ಮೂರು ನಾಲ್ಕು ಪ್ರಶ್ನೆಗಳನ್ನು ಕೇಳಿ, ಉಳಿದ ಪ್ರಶ್ನೆಗಳಿಗೆ ತಮಗಿಷ್ಟ ಬಂದಂತೆ ಬರೆದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಆಯೋಗ ಮತ್ತು ಜಿಲ್ಲಾಡಳಿತ ನಿರ್ದೇಶನ ನೀಡಬೇಕು. ಸಮೀಕ್ಷೆ ಸಮಯದಲ್ಲಿ ಒಂದು ಕುಟುಂಬದಲ್ಲಿ ಐದು ಜನ ಸದಸ್ಯರಿದ್ದರೆ ಮೂರು ಜನರನ್ನು ನೋಂದಾಯಿಸಿಕೊಂಡು ಉಳಿದ ಸದಸ್ಯರನ್ನು ನಾಳೆ ಬಂದು ನೋಂದಾಯಿಸಿಕೊಳ್ಳುತ್ತೇವೆ ಎಂದು ಹೇಳಿ ಹೋದ ಗಣತಿದಾರರು ಈವರೆಗೆ ಮನೆಗಳ ಹತ್ತಿರ ಬಂದಿಲ್ಲ. ಈ ಬಗ್ಗೆ ಗಮನಹರಿಸಬೇಕು. ಎರಡನೇ ಬಾರಿಗೆ ಸಮೀಕ್ಷ ಕಾರ್ಯ ದಿನಾಂಕಗಳನ್ನು ವಿಸ್ತರಿಸಿ ಆಯೋಗ ಪ್ರಕಟಣೆ ನೀಡಿತ್ತು. ಆದರೆ ಹಾಸನ ಜಿಲ್ಲೆ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶವಾಗಿದ್ದು ಎರಡನೇ ಅವಧಿಗೆ ಸಮೀಕ್ಷೆ ಕಾರ್ಯವನ್ನು ವಿಸ್ತರಿಸಿದ ನಂತರ ಹಾಸನ ಜಿಲ್ಲೆಯಲ್ಲಿ ವಿಪರೀತ ಮಳೆಯಾಗುತ್ತಿದ್ದು ಸಮೀಕ್ಷೆ ಕಾರ್ಯದಲ್ಲಿ ಗಣತಿದಾರರು ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಆಯೋಗ ಗಮನಹರಿಸಬೇಕು. ಆದ್ದರಿಂದ ಈ ಬಗ್ಗೆ ಆಯೋಗ ಗಂಭೀರವಾಗಿ ಚಿಂತಿಸಿ ಇನ್ನೊಂದು ಬಾರಿ ಸಮೀಕ್ಷೆ ಕಾರ್ಯದ ದಿನಾಂಕವನ್ನು ವಿಸ್ತರಿಸಬೇಕೆಂದು ಕೋರುತ್ತೇವೆ. ಜಿಲ್ಲೆಯ ಸಕಲೇಶಪುರ ತಾಲೂಕು ಮತ್ತು ಬೇಲೂರು ತಾಲೂಕುಗಳಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಸಮೀಕ್ಷೆಗೆ ನೀಡಿರುವ ಆಪ್, ನೆಟ್ವರ್ಕ್ ಇಲ್ಲದೆ ತುಂಬಾ ತೊಡಕಾಗಿದೆ. ಆದುದರಿಂದ ಆಯೋಗ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಆರ್.ಪಿ.ಐ. ಸತೀಶ್, ಅಂಬೂಗ ಮಲ್ಲೇಶ್, ಹರೀಶ್ ಉಳುವಾರೆ, ಶಿವಮ್ಮ ಇತರರು ಉಪಸ್ಥಿತರಿದ್ದರು.