

ಕಳಸ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದು ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಹಾಗೂ ವಿವಿಧ ಕ್ಷೇತ್ರ ಕಳಸ ಪ್ರಖಂಡದಿಂದ ಪ್ರತಿಭಟನೆ ನಡೆಸಲಾಯಿತು.
ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕಳಸ ಪೊಲೀಸ್ ಠಾಣಾ ಸಮೀಪ ಮುಖ್ಯ ರಸ್ತೆಯಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಆರ್‌ಎಸ್‌ಎಸ್ ಮುಖಂಡ ರಮೇಶ್ ಗೊರಸುಗುಡಿಗೆ ಮಾತನಾಡಿ, ಪಾಕಿಸ್ತಾನ ಉಗ್ರರನ್ನು ಪೋಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಉಗ್ರಗಾಮಿಗಳು ಹಿಂದುಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ನಾವು ಸಹಿಸೋದಿಲ್ಲ. ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತೇವೆ. ಪ್ರತಿ ಹಿಂದು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್ ಮಾತನಾಡಿ, ಜಾತಿಗಳ ಸಂಘಟನೆಯಲ್ಲಿ ನಾವೆಲ್ಲ ತೊಡಗಿದ್ದೇವೆ. ಆದರೆ ಮುಸಲ್ಮಾನ ಉಗ್ರರು ಹಿಂದುಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದಾರೆ. ಜಾತಿ ಸಂಘಟನೆಯನ್ನು ಬಿಟ್ಟು ಮೊದಲು ನಾವು ಹಿಂದು ಸಂಘಟನೆಯನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಹೇಶ್, ಪ್ರೀತಮ್ ಹೆಬ್ಬಾರ್, ಮುಖಂಡರಾದ ಎಂ.ಎ.ಶೇಷಗಿರಿ, ಸುಜಯಾ ಸದಾನಂದ, ಜಗದೀಶ್ ಭಟ್, ನಾಗೇಶ್ ಭಟ್, ನಾಗಭೂಷಣ್, ಪ್ರಸಿದ್ಧ ಜೈನ್, ಬಾಲಕೃಷ್ಣ ಪ್ರಭು ಇತರರಿದ್ದರು.