ಜಾತಿ ವ್ಯವಸ್ಥೆ ವಿರುದ್ಧ ಶ್ರಮಿಸಿದ ಸಂತ

CTD.... KANAKA -DM
Published on

ಚಿತ್ರದುರ್ಗ: ಎಲ್ಲ ವರ್ಗಗಳ ನಾಯಕ, ಮಹಾನ್ ದಾರ್ಶನಿಕ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಕುರುಬರ ಸಂಘ ಮತ್ತಿತರ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ತರಾಸು ರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಪ್ಪಟ ದೇಸಿ ಚಿಂತನೆಯುಳ್ಳ ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಶ್ರಮಿಸಿದ್ದ ಕನಕರ ಮಾನವೀಯ ತುಡಿತ-ಮಿಡಿತವಿರುವ ಕೀರ್ತನೆಗಳು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟ ಪ್ರಯೋಗವಾಗಿದೆ. ಅವುಗಳ ಮೂಲಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ ಎಂದರು.

ಅಧಿಕಾರ, ಶ್ರೀಮಂತಿಕೆ ಇದ್ದರೂ ಜ್ಯಾತ್ಯತೀತ ನಿಲುವು ಉಳಿಸಲು, ಸಾಮಾಜಿಕ ನ್ಯಾಯ, ಮಾನವೀಯ ಮೌಲ್ಯ ಮತ್ತು ಕೋಮು ಸೌಹಾರ್ದ ರಕ್ಷಣೆಗೆ ಬದ್ಧರಾಗಿದ್ದ ಮೂಲ ಪುರುಷ. ಸಂಗೀತ, ಸಾಹಿತ್ಯಕ್ಕೆ ಅವರ ಕೊಡುಗೆ ಆಗಾಧ. ಮೌಲ್ಯಗಳಿಗೆ ಅವರು ನಡೆಸಿದ ಏಕಾಂಗಿ ಹೋರಾಟ ಶ್ಲಾಘನೀಯವೆಂದರು.

ಕರ್ನಾಟಕ ಕುರುಬರ ಸಂಘ ಪ್ರಕಟಿಸಿದ, ಎಚ್. ದಂಡಪ್ಪ ಸಂಪಾದಿಸಿದ ‘ಕವಿ ಕನಕ ದಾಸರು’ ಕೃತಿಯನ್ನು ಸಚಿವರು ಬಿಡುಗಡೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಸಮಾಜ ಸುಧಾರಣೆ, ಅಧ್ಯಾತ್ಮದೆಡೆ ಮುಖ ಮಾಡಿ ಸಂತಶ್ರೇಷ್ಠ ಕನಕದಾಸ ಎನಿಸಿದರು. ಕೆಳ ವರ್ಗದ ಧ್ವನಿಯಾಗಿದ್ದ ಕನಕ ದಾಸರು ಸರ್ವರಿಗೂ ಸಮಪಾಲು, ಸಮಬಾಳು ತತ್ವಗಳನ್ನು ಪ್ರತಿಪಾದಿಸಿದರು. ಎಲ್ಲರ ಮನ, ಮನೆಗಳಲ್ಲಿ ಕನಕರ ತತ್ವಾದರ್ಶಗಳ ಜ್ಯೋತಿ ಬೆಳಗಬೇಕೆಂದರು.

ಉಪನ್ಯಾಸ ನೀಡಿದ ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ. ರವಿ, ಕನಕದಾಸರ ಮುಂಡಿಗೆಗಳ ಅಳವಾದ ಅಧ್ಯಯನದ ಅಗತ್ಯವಿದೆ. ಶ್ರೇಣೀಕೃತ ವರ್ಗ ಸಂಘರ್ಷದ ಸಮಾಜದಲ್ಲಿ ಕುಲೀನ ಕುಲ ವ್ಯವಸ್ಥೆ ಪ್ರಶ್ನಿಸಿದರು. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ಬದುಕಿನ ವಾಸ್ತವವನ್ನು ಹೇಳಿದ್ದಾರೆ ಎಂದರು.

ಕುರುಬರ ಸಂಘದಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸಮಾಜ ಸೇವಕರಾದ ಕೆಇ ಬಿ ಷಣ್ಮುಖಪ್ಪ, ಎಂ.ವಿ.ಮಾಲತೇಶ್, ಪರುಶುರಾಮ, ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ಕುಡಾ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಮಲ್ಲಿಕಾರ್ಜುನಯ್ಯ, ವೈದ್ಯರಾದ ಡಾ.ಇ.ಸತೀಶ್, ಡಾ.ರಶ್ಮಿ ಡಿ.ಮಲ್ಲಪ್ಪ, ಕೃಷಿಕರಾದ ಬಿ. ಜಗನ್ನಾಥ್, ರೇಣುಕಾರಾಜ್, ಸಾಹಿತಿ ಸುಭಾಷ್ ಚಂದ್ರ ದೇವರಗುಡ್ಡ, ಜಿಲ್ಲಾ ಮಸಾಪ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ, ಪಿಡಿಒ ರೂಪಾ ಕುಮಾರಿ, ಪಿಎಸ್‌ಐ ಪಿ. ಸುರೇಶ್, ಪತ್ರಕರ್ತ ಮಾಲತೇಶ್ ಅರಸ್, ಕಾರ್ಮಿಕ ಮುಖಂಡ ಆರ್.ತಿಪ್ಪೇಸ್ವಾಮಿ ಅವರನ್ನು ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತೆ ಎಂ.ರೇಣುಕಾ, ಸದಸ್ಯೆ ಪಿ.ಕೆ. ಮೀನಾಕ್ಷಮ್ಮ, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಣ್ಣ, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ತಾಪಂ ಇಒ ರವಿಕುಮಾರ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಪ್ರಧಾನ ಕಾರ‌್ಯದರ್ಶಿ ಬಿ.ಟಿ. ಜಗದೀಶ್, ತಾಲೂಕು ಅಧ್ಯಕ್ಷ ಕೆ.ಓಂಕಾರಪ್ಪ, ಎಚ್.ಮಂಜಪ್ಪ ಇತರರು ಇದ್ದರು.

ಎಸ್.ಕೆ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಆಯಿತೋಳು ವಿರೂಪಾಕ್ಷಪ್ಪ ತಂಡದ ಕಲಾವಿದರು ಕನಕದಾಸರ ಕೀರ್ತನೆಗಳನ್ನು ಪ್ರಸ್ತುತಪಡಿಸಿದರು.

----

ಅದ್ದೂರಿ ಮೆರವಣಿಗೆ

ಕನಕದಾಸರ ಭಾವಚಿತ್ರ ಮೆರವಣಿಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಕನಕ ಪ್ರತಿಮೆ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಸಚಿವ ಡಿ.ಸುಧಾಕರ್, ಎಂಎಲ್‌ಸಿ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ರಾಘವೇಂದ್ರ, ಕುಡಾ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ ಮತ್ತಿತರ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.

ಗೊರವರ ಕುಣಿತ, ಕಹಳೆ ನಾದ, ಡೊಳ್ಳು ಕುಣಿತ, ಕರಡಿ ಚಮ್ಮಳ, ತಮಟೆ ವಾದ್ಯ, ಬ್ರಾಸ್‌ಬ್ಯಾಂಡ್ ಇತ್ಯಾದಿ ಕಲಾ ತಂಡಗಳು ಮೆರುಗು ನೀಡಿದವು. ಸಂಗೊಳ್ಳಿ ರಾಯಣ್ಣ, ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮದಕರಿ ನಾಯಕ ವೃತ್ತಗಳ ಮೂಲಕ ಮೆರವಣಿಗೆ ರಂಗಮಂದಿರ ತಲುಪಿತು. ಎಸಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ಎಸ್‌ಪಿ ರಂಜಿತ್ ಕುಮಾರ್ ಬಂಡಾರು, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಎಸ್. ಶ್ರೀ ರಾಮ್, ಬಿ.ಟಿ.ಜಗದೀಶ್, ಓಂಕಾರಪ್ಪ, ಪೌರಾಯುಕ್ತೆ ಎಂ.ರೇಣುಕಾ ಇದ್ದರು.

-----

ಸರ್ಕಾರಕ್ಕೆ ಮನವಿ

ಕುರುಬ ಸಮುದಾಯದ ಅಭಿವೃದ್ಧಿಗೆ ಜಿಲ್ಲೆಯ ಆರು ತಾಲೂಕುಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಹ ಲವು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀರಾಮ್, ಜಗದೀಶ್, ಸಚಿವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು 6 ಕೋಟಿ ರೂ. ಅನುದಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು, ವಿವಿಧ ತಾಲೂಕು ಕೇಂದ್ರಗಳ ಸಮುದಾಯ ಭವನಗಳಿಗೆ ಅನುದಾನ, ನಿವೇಶನ ಇತ್ಯಾದಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net