ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದವರು ಫಕೀರಸ್ವಾಮಿಗಳು

New Project
ಮುದ್ದೇಬಿಹಾಳ ತಾಲೂಕಿನ ಶಿರೋಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಫಕೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಿರಹಟ್ಟಿ ಭಾವೈಕ್ಯತಾ ಮಹಾ ಸಂಸ್ಥಾನಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳಿಗೆ ನಾಣ್ಯಗಳಿಂದ ತುಲಾಭಾರ ನಡೆಸಲಾಯಿತು. ಶಾಸಕ ಸಿ.ಎಸ್. ನಾಡಗೌಡ, ಕುಂಟೋಜಿ ಚೆನ್ನವೀರ ದೇವರು, ಇಟಗಿ ಗುರುಶಾಂತವೀರ ಶಿವಾಚಾರ್ಯರು ಇದ್ದರು.
Published on

ಮುದ್ದೇಬಿಹಾಳ: ಹಿಂದು-ಮುಸ್ಲಿಂರಲ್ಲಿನ ವೈಷಮ್ಯ, ದ್ವೇಷ, ಅಸೂಯೆ ತೊಡೆದು ಹಾಕಿ ನಾವೆಲ್ಲರೂ ಸಮಾನರು ಎಂದು ಸಾರಿದವರು ಫಕೀರೇಶ್ವರ ಸ್ವಾಮಿಗಳು ಎಂದು ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ತಾಲೂಕಿನ ಶಿರೋಳದಲ್ಲಿ ಸೋಮವಾರ ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಲವಾರು ಪವಾಡಗಳನ್ನು ಮಾಡಿದ ಶರಣರಲ್ಲಿ ಫಕಿರೇಶ್ವರ ಸ್ವಾಮಿಗಳು ಒಬ್ಬರು. ಶಿರಹಟ್ಟಿ ಮಠದಲ್ಲಿ ಇಂದಿಗೂ ಹಲವು ಪವಾಡಗಳು ನಡೆಯುತ್ತಿವೆ ಎಂದು ಹೇಳಿದರು.

ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಮಾತನಾಡಿ, ಧರ್ಮದಲ್ಲಿ ರಾಜಕಾರಣವಿರಬಾರದು. ರಾಜಕಾರಣದಲ್ಲಿ ಧರ್ಮವಿರಬೇಕು. ಒಂದು ವೇಳೆ ಧರ್ಮದಲ್ಲಿ ರಾಜಕಾರಣ ಬಂದರೆ ಸಮಾಜ ಒಡೆದು ಛಿದ್ರವಾಗುತ್ತದೆ. ಮೇಲು ಕೀಳು ಭಾವನೆ, ವ್ಯತ್ಯಾಸಗಳು ಶುರುವಾಗುತ್ತವೆ. ಮತ್ತೆ ಸಾಮಾಜಿಕ ವ್ಯವಸ್ಥೆ ಹಿಂದಿನ ಕಾಲಕ್ಕೆ ಹೋಗುವುದಾಗುತ್ತದೆ. ಇದು ಆಗಬಾರದು. ನಾವೆಲ್ಲ ಒಂದಾಗಿ ಬದುಕು ನಡೆಸಬೇಕು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮಿಗಳ ಆಶಯದಂತೆ ಕುಂಟೋಜಿ ಚೆನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ನಡೆಸಲು ಎಲ್ಲರೊಂದಿಗೆ ಸಭೆ ನಡೆಸಿ ಶ್ರೀಗಳ ಮಾರ್ಗದರ್ಶನದಂತೆ ನಡೆದುಕೊಳ್ಳುವುದಾಗಿ ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕುಂಟೋಜಿ ಹಿರೇಮಠದ ಚೆನ್ನವೀರ ದೇವರು, ಇಟಗಿ ಭೂಕೈಲಾಸ ಮಠದ ಶಾಂತವೀರ ಶಿವಾಚಾರ್ಯರು, ಕವಡಿಮಟ್ಟಿ ದೇವಿ ಆರಾಧಕ ಬಸವಪ್ರಭು ಹಿರೇಮಠ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಕರ್ತೃ ಗದ್ದುಗೆ ಹಾಗೂ ಉತ್ಸವ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನಡೆಸಲಾಯಿತು. ಜಂಗಮ ವಟುಗಳಿಗೆ ದೀಕ್ಷೆಯನ್ನು ಇಟಗಿ ಗುರುಶಾಂತವೀರ ಶಿವಾಚಾರ್ಯರು ನಡೆಸಿಕೊಟ್ಟರು. ಖಾಸ್ಗತೇಶ್ವರ ಮಠದಿಂದ ಸುಮಂಗಲಿಯರು ಕುಂಭ ಕಳಸದೊಂದಿಗೆ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳನ್ನು ಶಿರೋಳದ ಫಕೀರೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ಚೆನ್ನವೀರಸ್ವಾಮಿ ಶಿವಯೋಗಿಮಠ ಕುಟುಂಬದಿಂದ ದಿಂಗಾಲೇಶ್ವರ ಶ್ರೀಗಳನ್ನು ನಾಣ್ಯಗಳಲ್ಲಿ ತುಲಾಭಾರ ಮಾಡಲಾಯಿತು.

ಉದ್ಯಮಿ ಶರಣು ಸಜ್ಜನ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮುಖಂಡ ಶಿವಲಿಂಗಯ್ಯ ಶಿವಯೋಗಿಮಠ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್, ಎಂ.ಬಿ. ನಾವದಗಿ, ಸಿದ್ದಲಿಂಗಯ್ಯ ಕಲ್ಯಾಣಮಠ, ಅಪ್ಪು ಮದರಿ, ಶಿವನಗೌಡ ಬಿರಾದಾರ, ರಾಯನಗೌಡ ಪಾಟೀಲ್, ಮಲ್ಲನಗೌಡ ಬಿರಾದಾರ, ಶ್ರೀಕಾಂತ ಚಲವಾದಿ, ಡಾ. ಸಿ.ಕೆ. ಶಿವಯೋಗಿಮಠ, ಶಾಂತಯ್ಯ ಶಿವಯೋಗಿಮಠ ಇತರರಿದ್ದರು.

ಕುಂಟೋಜಿ ಚೆನ್ನವೀರ ದೇವರ ಪಟ್ಟಾಧಿಕಾರ ವಿಳಂಬವಾಗಲು ಹಾನಗಲ್ಲ ಕುಮಾರಸ್ವಾಮಿಗಳ ಸಿದ್ಧಾಂತ ಕಾರಣ ಎಂಬುದನ್ನು ತಿಳಿಯಪಡಿಸುತ್ತೇವೆ. ಅವರ ಸಿದ್ಧಾಂತದಂತೆ 40 ವರ್ಷಕ್ಕೆ ಪಟ್ಟಾಧಿಕಾರ ಆಗಬೇಕು. ಹೀಗಾಗಿ ಅವರ ಪಟ್ಟಾಧಿಕಾರ ಮಹೋತ್ಸವ ತಡವಾಗಿದೆ. ಶಾಸಕರಾದ ಅಪ್ಪಾಜಿ ನಾಡಗೌಡರು, ಸಮಾಜದ ಅಧ್ಯಕ್ಷರು, ಗಣ್ಯರ ಮುಖಂಡತ್ವದಲ್ಲಿ ಕುಂಟೋಜಿ ಶ್ರೀಗಳ ಪಟ್ಟಾಧಿಕಾರವನ್ನು ನಡೆಸಲು ಶೀಘ್ರ ಸಭೆ ನಡೆಸೋಣ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಪೀಠದಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net