ಜಾತಿ, ವರ್ಣ, ಲಿಂಗಭೇದ ವಿರೋಧಿಸಿದ್ದ ಬಸವಣ್ಣ

CTD BASAVA JAYNTI-DC OFFICE---
Published on

ಚಿತ್ರದುರ್ಗ: ಒಂಬೈನೂರು ವರ್ಷಗಳ ಹಿಂದೇ ಜಾತಿ, ವರ್ಣ ಹಾಗೂ ಲಿಂಗಭೇದ ವಿರೋಧಿಸಿದ್ದ ಬಸವಣ್ಣನವರ ಆಲೋಚನೆಗಳು ಕ್ರಾಂತಿಕಾರಿಯಾಗಿದ್ದವೆಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು. ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಬಸವಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣನವರಿಂದ ಸ್ಥಾಪಿತವಾಗಿದ್ದ ಅನುಭವ ಮಂಟಪ ಧಾರ್ಮಿಕ, ಸಾಮಾಜಿಕ ಸುಧಾರಣೆಗಳಿಗೆ ದಾರಿ ದೀಪವಾಗಿತ್ತು. ಜಗತ್ತು ಇರುವವರೆಗೂ ಬಸವಣ್ಣನವರ ತತ್ವ, ಸಿದ್ಧಾಂತ ಹಾಗೂ ವಿಚಾರಗಳು ಪ್ರಸ್ತುತವಾಗಿರುತ್ತವೆ ಎಂದು ತಿಳಿಸಿದರು.

ಸರ್ಕಾರ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಒದಗಿಸುತ್ತಿದೆ. ಅಧಿಕಾರಿಗಳು ಈ ಯೋ ಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ವಿಶ್ವಕ್ಕೆ ಬಸವಣ್ಣನವರ ಚಿಂತನೆಗಳನ್ನು ಪ್ರಚುರಪಡಿಸುವ ದೃಷ್ಟಿಯಿಂದ ಅಂತಾ ರಾಷ್ಟ್ರೀಯ ಆಧ್ಯಾತ್ಮಿಕ ಕೇಂದ್ರವನ್ನು ಸ್ಥಾಪಿಸಬೇಕಿದೆ. ಶರಣ ಸಾಹಿತ್ಯದ ಅಪ್ರಕಟಿತ ವಚನಗಳನ್ನು ಪ್ರಕಟಿಸಿ ಪ್ರಚುರ ಪಡಿಸಬೇಕು. ಇದಕ್ಕಾಗಿ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ ಎಂದು ಸೋಮಶೇಖರ್ ಅಭಿಪ್ರಾಯ ಪಟ್ಟರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಮನಗಳಲ್ಲಿ ಬಸವಣ್ಣನವರ ತತ್ವಗಳನ್ನು ಅನಾವರಣ ಮಾಡಿಕೊಳ್ಳಬೇಕು. ಆಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ. ಬಸವಣ್ಣನವವರ ತತ್ವದಲ್ಲಿ ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಮಹತ್ವವಿದೆ. ಕಾಯಕ ಎನ್ನುವುದು ಸಂಪತ್ತಿನ ಉತ್ಪಾದಕತೆಯಾದರೆ, ದಾಸೋಹ ಎನ್ನುವುದು ಉತ್ಪಾದಿತ ಸಂಪತ್ತಿನ ಸಮಾನ ಹಂಚಿಕೆ ತತ್ವವಾಗಿದೆ. ಬಸ ವಣ್ಣನವರ ನಡೆ ಹಾಗೂ ನುಡಿಯಲ್ಲಿ ಅಂತರವಿರಲಿಲ್ಲ. ನಡೆದ ಹಾಗೆಯೇ ನುಡಿದರು, ನುಡಿದ ಹಾಗೆಯೇ ಬದುಕಿದರು ಎಂದರು.

ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಬದಲಾಗಿಲ್ಲ. ಇದಕ್ಕೆ ವೀರಶೈವ ಸಮಾಜವೂ ಹೊರತಾಗಿಲ್ಲ. ಜಾತಿ ಸಂಕೋಲೆಗಳಿಂದ ಎಲ್ಲರೂ ಹೊರಬರಬೇಕು. ಎಲ್ಲ ಜಾತಿ ಹಾಗೂ ಧರ್ಮಗಳ ಜನರನ್ನು ಎಲ್ಲರೂ ಒಪ್ಪಿಗೊಂಡಾಗಲೇ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಮೂಡಲು ಸಾಧ್ಯ ಎಂದರು.

ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗದವರಿದ್ದರು. ಸ್ತ್ರೀಯರಿಗೂ ಸಮಾನ ಅವಕಾಶವಿತ್ತು. ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆಗಳಲ್ಲಿ ವಚನ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ಬರುತ್ತದೆ. ಪಂಡಿತ ಹಾಗೂ ಪಾಮರರೂ ತಮ್ಮ ಅನುಭವಗಳನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಮೂರ್ತಿ ಮಹಡಿ ಮಾತನಾಡಿದರು. ಜ್ಞಾನಭಾರತಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಡಾ.ಬಿ.ಎಂ.ಪ್ರಜ್ವಲ್ ವಿಶೇಷ ಉಪನ್ಯಾಸ ನೀಡಿದರು.

ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ, ಪೌರಾಯುಕ್ತೆ ರೇಣುಕಾ, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಎಸಿ ಮೆಹಬೂಬ್‌ಜಿಲಾನಿ ಖುರೇಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ರಂಗಕರ್ಮಿ ಕೆಪಿಎಂ ಗಣೇಶಯ್ಯ, ಮುಖಂಡರಾದ ಪಿ. ವೀರೇಂದ್ರಕುಮಾರ್, ಶಶಿಧರಬಾಬು, ಜಾಲಿಕಟ್ಟೆ ಶಿವರುದ್ರಪ್ಪ, ಜಿ.ಎಸ್. ಉಜ್ಜನಪ್ಪ, ಪಟೇಲ್ ಶಿವಕುಮಾರ್, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net