

ಕೆ.ಎಂ.ದೊಡ್ಡಿ: ಸುಳ್ಳುಗಳ ಸರಮಾಲೆ ಹೆಣೆಯುವ, ಜಾತ್ಯತೀತರೆಂದು ಹೇಳಿಕೊಂಡು ಜಾತೀಯತೆ ಮೇಲೆ ರಾಜಕೀಯ ಮಾಡುವವರಿಗೆ ಈ ಬಾರಿ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಇಲ್ಲಿನ ಹಲಗೂರು ವೃತ್ತದಲ್ಲಿ ಬಿಜೆಪಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮದ್ದೂರು ತಾಲೂಕನ್ನು ಇದುವರೆಗೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವ ಜೆಡಿಎಸ್ ನಾಯಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೆ, ಬಿಜೆಪಿ ತಾಲೂಕನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲಿದೆ ಎಂದು ಭರವಸೆ ನೀಡಿದರು.
ರೈತರ ಉದ್ಧಾರ ಮಾಡುತ್ತೇವೆ ಎಂದು ಹೇಳುವ, ಮಣ್ಣಿನ ಮಕ್ಕಳೆಂದು ಹೇಳಿಕೊಳ್ಳುವ ದೇವೇಗೌಡರ ಕುಟುಂಬದವರು ರೈತರ ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೆಆರ್‌ಎಸ್ ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಮೈಸೂರು ಬ್ಯಾಂಕ್ ಸ್ಥಾಪನೆಯೊಂದಿಗೆ ರಾಜ್ಯದಲ್ಲಿ ಬೃಹತ್ ಉದ್ದಿಮೆಗಳನ್ನು ಆರಂಭಿಸಿದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಪ ಮಾಡುವುದನ್ನು ಬಿಟ್ಟು ಕಾಂಗ್ರೆಸ್, ಜಾ.ದಳ ನಾಯಕರು ಟಿಪ್ಪುವಿನ ಜಪ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮೇಶ್, ಮುಖಂಡರಾದ ಎಸ್.ಪಿ. ಸ್ವಾಮಿ, ಹನುಮಂತು ಮಹೇಂದ್ರ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಇತರರು ಇದ್ದರು.