

ಕುಣಿಗಲ್: ದೇವಸ್ಥಾನಗಳಲ್ಲಿ ಕುಳಿತು ಶಿಕ್ಷಣ ಕಲಿತ ನಾವು ಹಳ್ಳಿಗಳಲ್ಲಿ ಆಚರಿಸುತ್ತಿದ್ದ ಅಸ್ಪಶ್ಯತೆಯನ್ನ ಕಣ್ಣಾರೆ ಕಂಡಿದ್ದೇವೆ. ಆದರೆ ಸಂವಿಧಾನ ಜಾರಿಯಾದ ನಂತರ ಶೋಷಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಸಮಾನತೆ ಬಂದಿದೆ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಕಾರಣ. ಯುವಜನರು ಜಾತಿಮತಗಳ ಗುಲಾಮರಾಗದೇ ವಿಶ್ವಮಾನವರಾಗಿ ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.ಕುಣಿಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಚಟುವಟಿಕೆಗಳ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನದ ಆಶಯಗಳ ರಕ್ಷಣೆ ಎಲ್ಲರ ಜವಾಬ್ದಾರಿ. ಬಸವಣ್ಣನವರು ದಯೆ ಧರ್ಮದ ಮೂಲವಯ್ಯ ಎಂದಿದ್ದರು. ಪಂಪನು ಮನುಷ್ಯ ಜಾತಿ ತಾನೊಂದೇ ವಲಂ ಎಂದು ಕರೆದಿದ್ದಾರೆ. ಕುವೆಂಪು ಅವರು ಮಂತ್ರ ಮಾಂಗಲ್ಯ ಮೂಲಕ ಸರಳ ಮದುವೆಗೆ ಅವಕಾಶ ಕಲ್ಪಿಸಿದರು ಎಂದರು. ಮಕ್ಕಳಿಗೆ ಹಣಕ್ಕಿಂತ ವಿದ್ಯೆ ಮುಖ್ಯ. ವಿದ್ಯಾರ್ಥಿಗಳು ಈ ಬಗ್ಗೆ ಯೋಚಿಸಬೇಕು. ನಾಡಿಗಾಗಿ, ನೀರಿಗಾಗಿ ಹೋರಾಟ ನಡೆಸಬೇಕಾದದ್ದು ಎಲ್ಲರ ಆದ್ಯ ಕರ್ತವ್ಯ. ವಿದ್ಯೆಯಿಂದ ಬದುಕಬಲ್ಲ ಶಕ್ತಿ ಸಿಗುತ್ತೆ. ಇದರಿಂದ ಪ್ರಪಂಚದ ಜ್ಞಾನ ಸಿಗುತ್ತದೆ. ಅಧಿಕಾರ ವ್ಯಾಮೋಹದಿಂದ ಜಗತ್ತಿನಲ್ಲಿ ಯುದ್ಧಗಳು, ವಿನಾಶಗಳು ನಡೆಯುತ್ತಿವೆ. ಇವೆಲ್ಲದರಿಂದ ಮುಕ್ತಿ ಪಡೆಯಬೇಕಾದರೆ ನಾವು ಉತ್ತಮ ಶಿಕ್ಷಣ ಪಡೆಯಬೇಕು. ಕೃಷಿ ಕಡೆಗೆ ಯುವಕರು ಚಿತ್ತಹರಿಸಿ, ಸುಧಾರಣೆ ಮಾಡಬೇಕು. ಭಾರತವು ಸಾಂಸತಿಕ ವಿಚಾರಗಳ ತವರು ಮನೆಯಾಗಿದೆ. ಭಾರತದ ಯಶಸ್ಸು ಅದರ ಶಿಕ್ಷಣದಲ್ಲಿದೆ. ಶಿಕ್ಷಣದಿಂದ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕಾಗಿದೆ ಎಂದರು. ಪ್ರಾಂಶುಪಾಲೆ ಮಾಯಾ ಸಾರಂಗಪಾಣಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನಕ್ರಮ ಮತ್ತು ಅಧ್ಯಯನದಲ್ಲಿ ತೊಡಗಿಕೊಳ್ಳುವ ಮೂಲಕ ಸತಜೆಗಳಾಗಿ ಎಂದರು. ಕ್ರೀಡೆ, ಸಾಂಸತಿಕ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಚಟುವಟಿಕೆಗಳ ವರದಿ ವಾಚಿಸಿದರು. ಅಧ್ಯಾಪಕ ರಾಮಾಂಜನಪ್ಪ, ಟಿ.ಎನ್.ನರಸಿಂಹಮೂರ್ತಿ, ಡಾ.ಎನ್.ಟಿ.ಶ್ರೀನಿವಾಸ್, ಸಿ.ಆರ್.ಮನೋಜ್ ಮತ್ತಿತರರು ಇದ್ದರು.