

ಶಿಕಾರಿಪುರ: ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮಿಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿ ತಿಂಗಳು ಕಳೆದರೂ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಂಡಿಲ್ಲ. ಇದರಿಂದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬವಾಗುತ್ತಲೇ ಇದೆ ಎಂದು ಶಿಕಾರಿಪುರ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಎಚ್.ಬಸವರಾಜ್ ಮಾರವಳ್ಳಿ ಆರೋಪಿಸಿದರು.
ಶಿಕಾರಿಪುರ ತಾಲೂಕಿನ ಪರಿಶಿಷ್ಟರು ಸುಮಾರು 40-50 ವರ್ಷದಿಂದ ಬಗರ್‌ಹುಕುಂ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಕೂಡಲೇ ಸಾಗುವಳಿ ಪತ್ರ ವಿತರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಜಾತಿ ಪ್ರಮಾಣ ಪತ್ರವು ವಿದ್ಯಾಭ್ಯಾಸ, ಉದ್ಯೋಗ, ಸರ್ಕಾರಿ ಸವಲತ್ತು ಪಡೆಯಲು ಅನುಕೂಲವಾಗಿದೆ. ಆದರೆ ಎಡಗೈ ಜಾತಿಗಳು ಮತ್ತು ಬಲಗೈ ಜಾತಿಗಳು ಜಾತಿ ಪ್ರಮಾಣ ಪಡೆದುಕೊಳ್ಳಲು ಗೊಂದಲ ಸೃಷ್ಟಿಸುತ್ತಿವೆ. ನಿರ್ದಿಷ್ಟ ಜಾತಿಗೆ ಸೇರಿದವರು ಪರಿಶಿಷ್ಟ ಜಾತಿಗಳ ಪಟ್ಟಿಯವರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಲಾ ಕಾಲೇಜು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಶಿಕಾರಿಪುರ ತಾಲೂಕಿಗೆ ಹೆಚ್ಚುವರಿಯಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ತೆರೆಯಬೇಕು. ಶಿರಾಳಕೊಪ್ಪ ಭಾಗದಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯ ಆರಂಭಿಸಬೇಕು ಎಂದು ಆಗ್ರಹಿಸಿದರು.
ಕಾಳೇಶಪ್ಪ, ಹನುಮಂತಪ್ಪ, ಮನೋಜ್‌ಕುಮಾರ್, ಮಂಜುನಾಥ್, ಭರತ್ ಎನ್. ಹಾರೋಗೊಪ್ಪ, ದಿನೇಶ್, ಮುಖೇಶ್, ಮಂಜುನಾಥ, ರಾಮಪ್ಪ ಇತರರಿದ್ದರು.