ಜಾತಿ ನಿಂದನೆ ಮಾಡಿದವನನ್ನು ಬಂಧಿಸದಿದ್ದರೆ ಪ್ರತಿಭಟನೆ

protest-fist-sketch-22337688
Published on

ಕೊಡಗು : ಸೆ.4ರಂದು ಶನಿವಾರಸಂತೆಯಲ್ಲಿ ಈರಪ್ಪ ಎಂಬವರಿಗೆ ದೌರ್ಜನ್ಯವೆಸಗಿ ಜಾತಿ ನಿಂದನೆ ಮಾಡಿದ ಆರೋಪಿಯನ್ನು ಒಂದು ವಾರದೊಳಗೆ ಬಂಧಿಸದಿದ್ದರೆ, ಶನಿವಾರಸಂತೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.


ನಾಕಲಗೋಡು ಗ್ರಾಮದ ಬಸವರಾಜು ಜಾತಿನಿಂದನೆ ಮಾಡಿದ್ದು, ಸೆ.4 ರಂದು ಎಫ್‌ಐಆರ್ ದಾಖಲಾಗಿದೆ. ಆದರೆ ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ . ವಾರದೊಳಗೆ ಬಂಧಿಸದಿದ್ದರೆ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿ ಗೋಷ್ಠಿಯಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಂ.ಎಸ್.ಕುಮಾರ್ ಎಚ್ಚರಿಸಿದರು.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಶನಿವಾರಸಂತೆ ಸುತ್ತಮುತ್ತಲಿನ ಕೆಲ ನಕಲಿ ದಲಿತ ನಾಯಕರು ಆರೋಪಿ ಪರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿರುವುದು ಖಂಡನೀಯ. ಅಲ್ಲದೆ ಈರಪ್ಪ ಅವರ ಪರವಿದ್ದ ನಮ್ಮ ಮೇಲೂ ಸುಳ್ಳು ಅರೋಪ ಹೊರಿಸಲಾಗಿದೆ ಎಂದರು.


ಅನ್ಯಾಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕು. ಆದರೆ ದಲಿತಪರ ಹೋರಾಟಗಾರರ ಮೇಲೆ ಅಪವಾದ ಹೊರಿಸಿ, ಪತ್ರಿಕಾ ಹೇಳಿಕೆ ನೀಡಿರುವುದು ಅಮಾನವೀಯ ಎಂದು ಹೇಳಿದರು. ಗೋಷ್ಠಿಯಲ್ಲಿ ಶನಿವಾರಸಂತೆ ಹೋಬಳಿ ಸಂಚಾಲಕ ಎಚ್.ಆರ್.ಫಾಲಾಕ್ಷ, ಸದಸ್ಯರಾದ ಪಿ.ಎನ್.ಸಂತೋಷ್, ಎ.ಎನ್.ಅವಿನಾಶ್, ಎಚ್.ಬಿ.ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net