

ತುಮಕೂರು: ಸಮಾಜದ ಮುಖ್ಯವಾಹಿನಿಗೆ ಬಾರದೆ ಹಿಂದುಳಿದಿರುವ ಸಮುದಾಯಗಳ ಅಸ್ಮಿತೆ ಶಿವ ಶರಣರು, ಶಿವ ಶರಣರಿಗಿದ್ದ ವೃತ್ತಿ ಗೌರವವನ್ನು ನಾವೂ ಸಹ ಬೆಳೆಸಿಕೊಳ್ಳಬೇಕು ಎಂದು ಹಿರೇಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕುಳುವ ಮಹಾಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀನುಲಿಯ ಚಂದಯ್ಯನವರ ಜಯಂತಿಯಲ್ಲಿ ಮಾತನಾಡಿದ ಇವರು ಪ್ರಜಾ ಪ್ರಭುತ್ವದ ಕಾಲಘಟ್ಟದಲ್ಲಿ ಜೀವನ ಸಾಗಿಸುತ್ತಿರುವ ನಾವು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವೃತ್ತಿ, ಜಾತಿ, ಧರ್ಮಗಳ ಕೀಳರಿಮೆಯಿಂದ ಹೊರಗೆ ಬಂದು ಸಾಧನೆ ಮಾಡಬೇಕು ಎಂದರು.
ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ತಮ್ಮ ಕಾಯಕ ನಿಷ್ಠೆಗೆ ಗುರುತಾಗಿದ್ದ ನುಲಿಯ ಚಂದಯ್ಯನವರ ತತ್ವಾದರ್ಶಗಳು ತಳ ಸಮುದಾಯಗಳಿಗೆ ಮಾರ್ಗದರ್ಶಕವಾಗಿದ್ದು, ತಳ ಸಮುದಾಯಗಳು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಡಾ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವದಿಂದ ಜನರು ಒಟ್ಟಾದಾಗ ಮಾತ್ರ ತಳ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರುತ್ತವೆ ಎಂದರು. ಶ್ರೀ ನುಲಿಯ ಚಂದಯ್ಯ ಸೇರಿದಂತೆ ಶಿವಶರಣರು ತಿಳಿಸಿರುವ ಜೀವನ ಮೌಲ್ಯಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಶೋಷಿತ ಮತ್ತು ದಮನಿತ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡ ಶಿವ ಶರಣರ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರು ವಿದ್ಯಾವಂತರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಹೇಳಿದರು.
ಉತ್ತಮ ಬದುಕು ಕಟ್ಟಿಕೊಳ್ಳಲು ಶ್ರೀ ನುಲಿಯ ಚಂದಯ್ಯನವರಂತಹ ಶಿವಶರಣರ ವಿಚಾರಧಾರೆ ಅರಿತುಕೊಳ್ಳಬೇಕು, ಶೋಷಿತ ಸಮುದಾಯಗಳು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕು. ನಿರಂತರ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಓದಿ ಉನ್ನತ ಅಧಿಕಾರಿಗಳಾಗುವ
ಮೂಲಕ ಸಮುದಾಯದಕ್ಕೆ ದೊಡ್ಡ ಅಸ್ತಿಗಳಾಗಬೇಕು ಎಂದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಮಾತನಾಡಿ, ಕುಶಲ ಕರ್ಮಿ ಮತ್ತು ಕಾಯಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಸವಣ್ಣನವರ ಸಮಕಾಲೀನರಾದ ಶ್ರೀ ನುಲಿಯ ಚಂದಯ್ಯ ಅವರು ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದರು. ನುಲಿಯ ಚಂದಯ್ಯ ಅವರ ವಿಚಾರಧಾರೆ ತಿಳಿದುಕೊಂಡು ಕಾಯಕ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಾದ ಮಧುಗಿರಿ ತಾಲೂಕು ಬೇಡತ್ತೂರಿನ ಜಗದೀಶ್, ತುಮಕೂರಿನ ಜನಪದ ಕಲಾವಿದ ಹನುಮಂತರಾಯಪ್ಪ, ಕೊರಟಗೆರೆ ತಾಲೂಕು ಯಾದಗೆರೆಯ ಮಂಗಳವಾದ್ಯ ಕಲಾವಿದ ನಾಗರಾಜು, ಹರಿಕಥೆ ದಾಸರಾದ ದೊಡ್ಡಸಾರಂಗಿಯ ಮಂಜುನಾಥ್ ಹಾಗೂ ಕುಣಿಗಲ್ನ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಬಿ.ಆರ್ಲೋಕೇಶ್ ಸ್ವಾಮಿ, ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಭಜಂತ್ರಿ, ಮುಖಂಡರಾದ ಶಿವರಾಮ್, ಶ್ರೀನಿವಾಸ್ ಮೂರ್ತಿ ಮತ್ತಿತರರು ಇದ್ದರು.