ಜಾತಿ, ಧರ್ಮ ಮೀರಿ ಆಚರಿಸುವ ಹಬ್ಬ

15 YERRISWAMY 02
Published on

ಬಳ್ಳಾರಿ : ಹೋರಾಟಗಾರರ ತ್ಯಾಗ, ಬಲಿದಾನದಿಂದ ಸಿಕ್ಕ ಸ್ವಾತಂತ್ರೃದ ಹಬ್ಬವು ದೇಶದಲ್ಲಿ ಜಾತಿ, ಧರ್ಮ ಎಲ್ಲೆ ಮೀರಿ ಆಚರಿಸುವ ಹಬ್ಬವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ವಿಮ್ಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ 78ನೇ ಸ್ವಾತಂತ್ರೋತ್ಸವದ ಧ್ವಜಾರೋಹಣಾ ನೆರವೇರಿಸಿ ಮಾತನಾಡಿದರು. ಅನೇಕ ಮಹಾನ್ ಹೋರಾಟಗಾರರು ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.ಅಂದಿನ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು, 1947ರಲ್ಲಿ ದೇಶದ ಅಭಿವೃದ್ಧಿಗೆ ಪಣ ತೊಟ್ಟಿದ್ದರು.ದೂರದೃಷ್ಟಿಯ ಮೂಲಕ ಹೊಸ ಭಾರತವನ್ನು ಕಟ್ಟಿದರು. ಇಂದು ಭಾರತ ಇಸ್ರೋನಂತಹ ಹೆಮ್ಮೆಯ ಸಂಸ್ಥೆಯನ್ನು ಅಂತರಿಕ್ಷ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಸಾಕ್ಷಿಯಾಗಿದ್ದು, ಸಾಲು ಸಾಲು ರಾಕೆಟ್ ಹಾರಿಸುವ ಮೂಲಕ ವಿಶ್ವದ ಮುಂದುವರೆದ ರಾಷ್ಟಗಳಿಗೂ ಸವಾಲೆಸೆದಿದೆ. ರಾಷ್ಟ್ರೀಯ ಐಕ್ಯತೆ, ರಕ್ಷಣೆ ಹಾಗೂ ಸಮಗ್ರತೆಗೆ ಎಲ್ಲರೂ ಒಟ್ಟಾಗಿ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಸಮಾಜದ ಸಂಪತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ನಮ್ಮ ಸರ್ಕಾರವು ಕಟಿಬದ್ಧವಾಗಿದ್ದು, ಬಡವರು ದುಡಿದ ಹಣವನ್ನು ಅವರಿಗೇ ನೀಡಲು ರಾಜ್ಯ ಸರ್ಕಾರವು ಮಹತ್ವದ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆ ಸೇರಿ ಒಟ್ಟು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಎಲ್ಲ ಐದು ಯೋಜನೆಗಳ ಫಲಾನುಭವಿಗಳ ಅಂಕಿಅಂಶಗಳ ಜತೆಯಲ್ಲಿ ಅನುದಾನ ಬಿಡುಗಡೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಬಳಿಕ ವಿವಿಧ ಕ್ಷೇತ್ರ ಮತ್ತು ಕ್ರೀಡೆಗಳಲ್ಲಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಬಹುಮಾನ ಪಡೆದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆದವು. ನಗರದ ದೈಹಿಕ ವಿಶೇಷ ಚೇತನರ 13 ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಸಚಿವರು ವಿತರಣೆ ಮಾಡಿದರು.
ಧ್ವಜಾರೋಹಣಕ್ಕೂ ಮುನ್ನ ನಗರದ ವಿಮ್ಸ್ ಆಡಳಿತ ಕಚೇರಿ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆಗೆ ಮಾರ್ಲಾಪಣೆ ಹಾಗೂ ಇಲ್ಲಿನ ಗವಿಯಪ್ಪ ವೃತ್ತದಲ್ಲಿನ ಬೃಹತ್ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು.

ಪ್ರಮುಖರಾದ ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಸುಕುಂ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯುಲು, ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net