ಜಾತಿ, ಧರ್ಮ ಭೇದ ಸಲ್ಲದು

MLK Pravacana 13
Published on

ಮೊಳಕಾಲ್ಮೂರು: ಜಾತಿ, ಧರ್ಮ ಭೇದ ತೊರೆದು ಮಾನವ ಕುಲ ಒಂದೇ ಎಂಬ ಸಂದೇಶ ಸಾರಿದ ಮಹನೀಯರನ್ನು ಸರ್ವ ಸಮುದಾಯದವರು ಗೌರವಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಇಸ್ಲಾಂ ಸಮುದಾಯ ಭವನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮೊಹಮ್ಮದ್ ಅವರ ಜೀವನ ಮತ್ತು ಸಂದೇಶ ಅಭಿಯಾನ ಕುರಿತು ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಆದರ್ಶಪ್ರಾಯ ಸಮ ಸಮಾಜವನ್ನು ನಿರ್ಮಿಸಿದ ಪ್ರವಾದಿ ಮೊಹಮ್ಮದ್ ಅವರು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿವಾದವರಲ್ಲ. ಭೋಲೋಕದಲ್ಲಿರುವ ಇಡೀ ಮಾನವ ಕುಲಕ್ಕೆ ಪ್ರವಾದಿಯಾಗಿದ್ದಾರೆ. ಅವರ ಜಾತ್ಯತೀತ ನೀತಿ, ಮಾನವೀಯ ಸಂದೇಶ ಸರ್ವಕಾಲಕ್ಕೂ ಸಾರ್ವತ್ರಿಕ ಸತ್ಯ ಎಂದರು.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಚಂದ್ರಯಾನ ಪ್ರವೇಶದ ಮೂಲಕ ಜಗತ್ತು ಭಾರತದ ಕಡೆ ನೋಡುಷ್ಟು ಸಾಧನೆ ಮಾಡಿದ್ದೇವೆ. ನಾಗರಿಕತೆಯ ಉತ್ತುಂಗದಲ್ಲಿದ್ದೇವೆ. ಆದರೆ, ಮಾನಸಿಕವಾಗಿ ಅತ್ಯಂತ ಹಿಂದುಳಿದಿದ್ದೇವೆ. ಅಸ್ಪಶ್ಯತೆ, ವರ್ಣ-ಲಿಂಗ ಭೇದ, ಆರ್ಥಿಕ ಅಸಮಾನತೆ, ತಾರತಮ್ಯ ನಡೆ ಸಮಾಜಕ್ಕೆ ಅಂಟಿರುವ ಬಹುದೊಡ್ಡ ರೋಗ. ಇದರಿಂದ ಹೊರಬರಲು ನಾವೆಲ್ಲರೂ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಪ್ರವಾದಿ ಮಹಮ್ಮದ್ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಮಾತ್ ಎ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಆಕ್ಬರ್ ಆಲಿ ಉಡುಪಿ ಮಾತನಾಡಿ, ನಾಮ ಹಲವು, ದೇವರು ಒಬ್ಬನು ಎಂಬ ಸದ್ಭಾವನೆಯಲ್ಲಿ ನಾವೆಲ್ಲರೂ ಒಗ್ಗೂಡಿ ಸಾಗಿದರೆ ನೆಮ್ಮದಿ ಬದುಕು ನಮ್ಮದಾಗಲಿದೆ ಎಂದರು.

ಜಿಲ್ಲಾ ಸಂಚಾಲಕ ಜನಾಬ್ ಮುಕರ‌್ರಂ ಸಯೀದ್, ತಾಲೂಕು ಸಂಚಾಲಕ ಜನಾಬ್ ವಿ.ಮೊಹಮದ್ ರಫೀಕ್, ಶಿವಮೊಗ್ಗ ವಲಯ ಸಂಚಾಲಕ ಜನಾಬ್ ಮೌಲಾನ ಸಲೀಂ ಉಮರಿ, ವಿ.ಅಬ್ದುಲ್ ರಹಿಂ ಸಾಬ್, ಜಾಕೀರ್ ಹುಸೇನ್, ಮೊಹಮದ್ ಷಪಿವುಲ್ಲಾ, ನಾಗೇಶ್ ಬಾಬು, ರಾಮಕೃಷ್ಣಪ್ಪ, ಶ್ರೀನಿವಾಸಲು, ಮಹಮದ್ ವಲೀವುಲ್ಲ, ರಾಘವೇಂದ್ರ, ಮಹಮದ್ ಕಲೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net