

ಚನ್ನರಾಯಪಟ್ಟಣ: ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ನಡೆಯಲಿರುವ ಜಾತಿ ಜನಗಣತಿ ಸಮೀಕ್ಷೆ ವೇಳೆ ತಾಲೂಕಿನ ಭೋವಿ ಸಮಾಜದ ನಾಗರಿಕರು ಕಡ್ಡಾಯವಾಗಿ ಪಾಲ್ಗೊಂಡು ಸಮೀಕ್ಷೆ ವೇಳೆ ಜಾತಿ ಭೋವಿ, ಉಪಜಾತಿ ವಡ್ಡರ್ ಎಂದಷ್ಟೇ ಬರೆಸಬೇಕು ಎಂದು ಅಂತಾರಾಷ್ಟ್ರೀಯ ಭಾರತೀಯ ಭೋವಿ ವಡ್ಡರ ಸಮಾಜದ ಖಜಾಂಚಿ ಎನ್.ವೆಂಕಟೇಶ್ ಸಮುದಾಯಕ್ಕೆ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿದರದಲ್ಲಿ ಮಾತನಾಡಿದ ಅವರು, ರಾಜ್ಯದ ಭೋವಿ ವಡ್ಡರ್ ಜನಾಂಗಕ್ಕೆ ಜಾತಿ ಜನಗಣತಿ ಸಮೀಕ್ಷೆ ವೇಳೆ ಅನುಸರಿಸಬೇಕಾದ ಕ್ರಮದ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದೇವೆ. ತಪ್ಪದೆ ಎಲ್ಲರೂ ಜಾತಿ ಜನಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ತಾಲೂಕು ಭೋವಿ ವಡ್ಡರ್ ಸಮಾದ ಅಧ್ಯಕ್ಷ ದಿಲೀಪ್ ಮಾತನಾಡಿ, ಮೇ 5ರಿಂದ ನಡೆಯಲಿರುವ ಜಾತಿ ಜನಗಣತಿಯಲ್ಲಿ ತಾಲೂಕಿನ ಭೋವಿ ಸಮುದಾಯದವರು, ಜಾತಿ ಭೋವಿ, ಉಪಜಾತಿ ವಡ್ಡರ್ ಎಂದು ನಮೂದಿಸಬೇಕು ಎಂದರು.
ಸಮಾಜದ ನಗರ ಘಟಕದ ಅಧ್ಯಕ್ಷ ರವಿಚಂದ್ರ, ಮುಖಂಡರಾದ ಕುಮಾರ್, ಕೃಷ್ಣ, ರಾಜು, ಮಂಜು, ಲಕ್ಷ್ಮೀ ಇತರರು ಇದ್ದರು.