

ಕೊಪ್ಪ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವುದರ ಸಲುವಾಗಿ ರಾಜ್ಯ ಸರ್ಕಾರ ನಿವತ್ತ ನ್ಯಾಯಾಧೀಶ ಎಚ್.ನಾಗಮೋಹನ್‌ದಾಸ್ ನೇತತ್ವದಲ್ಲಿ ಸಮಿತಿ ರಚಿಸಿದೆ. ಅಧಿಕಾರಿಗಳು ಜಾತಿ ಜನಗಣತಿ ವೇಳೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲು ವಿಚಾರವಾಗಿ ಸದಾಶಿವ ಆಯೋಗ ನೀಡಿದ ವರದಿಯಲ್ಲಿ ಲೋಪವಿರುವ ಕಾರಣ ಈಗ ಮತ್ತೆ ಗಣತಿಗೆ ಮುಂದಾಗಿದೆ. ಕೊಪ್ಪ, ಶಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲಿ ಅಧಿಕಾರಿಗಳು ಶೇ.99ರಷ್ಟು ಗಣತಿ ಮಗಿದಿದೆ ಎಂದು ಹೇಳುತ್ತಿದ್ದಾರೆ. ಆದರೆ ಗಣತಿದಾರರು ಪರಿಶಿಷ್ಟ ಜಾತಿ ಮನೆಗಳಿಗೆ ಭೇಟಿ ನೀಡಿಲ್ಲ ಎಂಬ ಆರೋಪವಿದೆ. ಕೆಲವೆಡೆ ಜಾತಿ ನಮೂದಿಸುವಲ್ಲಿ ವ್ಯತ್ಯಯವಾಗಿದೆ ಎಂಬ ದೂರು ಇದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೇ 31 ಗಣತಿಗೆ ಕೊನೇ ದಿನ. ಸಮುದಾಯದವರು ಗಣತಿಯಲ್ಲಿ ಭಾಗಿಯಾಗದಿದಲ್ಲಿ ತಕ್ಷಣ ಜಾತಿ ನಮೂದಿಸಬೇಕು. ದಲಿತ ಸಂಘಟನೆ ಮುಖಂಡರು ಇದರಲ್ಲಿ ಶ್ರಮ ಹಾಕಬೇಕು. ಕಷ್ಟದಲ್ಲಿರುವ ಉಪ ಜಾತಿಗಳಿಗೆ ಶಕ್ತಿ ತುಂಬಲು ನಾವು ಮುಂದಾಗಬೇಕಿದೆ ಎಂದು ಹೇಳಿದರು.
ಎನ್.ಆರ್.ಪುರ ತಾಲೂಕಿನಲ್ಲಿ ಕಡಹಿನಬೈಲು, ಸೂಸಲುವಾನಿ, ಗುಬ್ಬಿಗ ಮುಂತಾದ ಪ್ರದೇಶಗಳಲ್ಲಿ ಕೇರಳದ ಪುಲಿಯನ್ಸ್ ಸಮುದಾಯ ವಾಸವಿದೆ. ಎರಡು ದಶಕಕ್ಕೂ ಹೆಚ್ಚು ಸಮಯ ಈ ಭಾಗದಲ್ಲಿ ನೆಲೆಸಿದ್ದರೂ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಸಂಬಂಧ ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಜತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ಇವರ ಸಮಸ್ಯೆ ಪರಿಹಾರ ಮಾಡಲು ಮುಂದಾಗುತ್ತೇವೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಮುಖಂಡರಾದ ಸಾಗರ್ ಕೋಗಿಲೆ, ಸಂತೋಷ್ ಮೂಡಿಗೆರೆ, ವಾಸಪ್ಪ ಕುಂಚೂರು, ಕಿರಣ್ ಇತರರಿದ್ದರು.