

ಕಿಕ್ಕೇರಿ : ಜಾತಿ ಚೌಕಟ್ಟುಗಳನ್ನು ಮೀರಿ ಹೊರಬಂದಾಗ ಮಾತ್ರ ನಾಡಿಗೆ ಏನಾದರೂ ಕೊಡುಗೆ ನೀಡಬಹುದು ಎಂದು ನಾಗಮಂಗಲ ಆರ್‌ಟಿ ಮಲ್ಲಿಕಾರ್ಜುನ ಹೇಳಿದರು.
ಸಮೀಪದ ಹಿರಿಕಳಲೆ ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕರ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಟ್ರಸ್ಟಿಗಳಿಗೆ ಸದಸ್ಯತ್ವದ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ದಾರ್ಶನಿಕರಾದ ಕನಕದಾಸರು ಶತಮಾನಗಳ ಹಿಂದೆಯೇ ಜಾತಿ ಪದ್ಧತಿ ಹೋಗಲಾಡಿಸಲು ಹೋರಾಟ ಮಾಡಿದರು.
ಯಾವುದೇ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡದ ಅವರು ಅನೇಕ ಕಾವ್ಯಗಳನ್ನು ರಚಿಸಿದರು. ಅಂದು ಉಡುಪಿಯಲ್ಲಿ ಜಾತಿ, ಕಂದಾಚಾರದಿಂದ ಕೃಷ್ಣನ ದರ್ಶನ ಸಿಗದಾದಾಗ ಭಕ್ತಿಯಿಂದ ಪ್ರಾರ್ಥಿಸಿದರು. ಕನಕರ ಭಕ್ತಿಗೆ ಒಲಿದು ಕೃಷ್ಣನ ಮೂರ್ತಿಯೇ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿ ದರ್ಶನ ನೀಡಿದ್ದು ಸಾಕ್ಷಾತ್ಕಾರದ ಪ್ರತೀಕ ಎಂದರು.
ಕನಕದಾಸರ ಜೀವನ, ಸಾಧನೆಗಳನ್ನು ಯುವಜನರು ಓದಿ ತಿಳಿಯಬೇಕು. ಅವರ ಸಾಹಿತ್ಯ ಅಧ್ಯಯನವಾಗಬೇಕು ಎಂದರು. ಹಿರಿಕಳಲೆ ಗ್ರಾಪಂ ಉಪಾಧ್ಯಕ್ಷ ರಾಮಕೃಷ್ಣ, ಮಾಜಿ ಅಧ್ಯಕ್ಷ ಜವರೇಗೌಡ, ತಾಪಂ ಮಾಜಿ ಸದಸ್ಯ ಮಂಜೇಗೌಡ, ಮುಖಂಡ ರವಿಕುಮಾರ್, ಗೋಪಾಲ್, ದೇವರಾಜು, ಸಣ್ಣರಾಜು, ಚಿರಂಜೀವಿ, ಕೌಶಿಕ್, ವಿಕಾಸ್, ಹರೀಶ, ಸಚಿನ್ ಇತರರು ಇದ್ದರು.