

ಮೈಸೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆಗೂ ಮುನ್ನ ಜಾತಿ ಗಣತಿಗೆ ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ನಿಖರವಾದ ಅಂಕಿ-ಅಂಶಗಳನ್ನು ತಿಳಿಯುವುದು ಬೇಡವೇ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಪ್ರಶ್ನಿಸಿದರು.
ದಲಿತ ಸಂಘರ್ಷ ಸಮಿತಿ ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ಶಾಖೆ ವತಿಯಿಂದ ನಟರಾಜ ಸಭಾಭವನದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಪಟ್ಟಭದ್ರ ಹಿತಾಸಕ್ತಿಗಳು ಈ ಜಾತಿ ಗಣತಿಯನ್ನು ವಿರೋಧ ಮಾಡುತ್ತಿವೆ. ಗ್ಯಾರಂಟಿ ಯೋಜನೆಗಳು, ಅನ್ನಭಾಗ್ಯಕ್ಕೂ ಉಳ್ಳವರು, ಶ್ರೀಮಂತರು ಆಕ್ಷೇಪ ವ್ಯಕ್ತಪಡಿಸುತ್ತಾರೆೆ. ಆದರೆ ಬಂಡವಾಳಶಾಹಿಗಳ ಕೋಟ್ಯಂತರ ರೂ. ಸಾಲವನ್ನು ಮನ್ನಾ ಮಾಡುವುದನ್ನು ಪ್ರಶ್ನಿಸುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ರಾಜಕೀಯ ಸ್ಥಾನಮಾನಕ್ಕಾಗಿ ದಸಂಸ ನಡೆಸಿದ ಹೋರಾಟದ ಫಲವಾಗಿ ಅನೇಕರು ರಾಜಕೀಯ ಅಧಿಕಾರ ಪಡೆದಿದ್ದಾರೆ. ಆದರೆ, ದಲಿತ ಸಮುದಾಯದ ಒಬ್ಬರೂ ಗಟ್ಟಿಯಾಗಿ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳುವುದಿಲ್ಲ.
ಮೇಲ್ಜಾತಿಯ ಒಕ್ಕಲಿಗ, ಲಿಂಗಾಯತರು ನಮ್ಮವರು ಮುಖ್ಯಮಂತ್ರಿಯಾಗಲೆಂದು ಹೇಳುತ್ತಾರೆ. ಸ್ವಾಮೀಜಿಗಳು, ಸಂಘಟನೆಗಳು ಮಾತಾಡುತ್ತವೆ. ಈಗ ಡಾ.ಜಿ.ಪರಮೇಶ್ವರ, ಸತೀಶ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ, ಎಚ್.ಸಿ.ಮಹದೇವಪ್ಪ ಮಾತಾಡುತ್ತಿರುವುದು ಉತ್ತಮ ಬೆಳವಣಿಗೆ. ಅಧಿಕಾರ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡುವಂತೆ ಕೇಳಬೇಕಿದೆ ಎಂದರು.
ಚಿಂತಕ ಡಾ.ಎಸ್. ತುಕರಾಂ ಮಾತನಾಡಿ, ಮತ್ತೆ ಮತ್ತೆ ಮೀಸಲಾತಿಯ ಪ್ರಶ್ನೆ ಎದುರಾಗುತ್ತಿದೆ. ಅಸ್ಪಶ್ಯತೆ, ಅಸಮಾನತೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಮೀಸಲಾತಿ ಇರಬೇಕಾಗುತ್ತದೆ. ಆದರೆ, ತಂತ್ರಗಾರಿಕೆಯಿಂದ ಪರೋಕ್ಷವಾಗಿ ಮೀಸಲಾತಿಯನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರವಾಗಬೇಕಿದೆ ಎಂದು ತಿಳಿಸಿದರು.
ಈಗ ಸಾಮಾಜಿಕ ಬದುಕು ತಬ್ಬಲಿಯಾಗಿದೆ. ಅವಮಾನ ಕಡಿಮೆಯಾಗಿಲ್ಲ. ಹೊಸಬಟ್ಟೆ ಹಾಕಿಕೊಂಡರೆ, ಅಂಬೇಡ್ಕರ್ ಹಾಡು ಕೇಳಿದರೆ ಸಹಿಸುತ್ತಿಲ್ಲ. ತಪ್ಪು ಪ್ರಶ್ನಿಸುವವರ ದನಿ ಕುಗ್ಗುತ್ತಿರುವ ಕಾಲದಲ್ಲಿದ್ದೇವೆ. ವ್ಯಕ್ತಿತ್ವಗಳು ಆಳುವ ಕಾಲದಲ್ಲಿ ವ್ಯಕ್ತಿಗಳು ಆಳುತ್ತಿದ್ದಾರೆ. ವ್ಯಕ್ತಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತವೆ. ವ್ಯಕ್ತಿಯೇ ದೇಶವ? ಈ ಬಗ್ಗೆ ಜನರು ಆಲೋಚಿಸಬೇಕು ಎಂದರು.
ಅಂಬೇಡ್ಕರ್ ಅವರು ಆಸ್ಪತ್ರೆ, ಶಿಕ್ಷಣ, ಸಾರ್ವಜನಿಕ ಉದ್ದಿಮೆಗಳು ಸರ್ಕಾರದ ಸುರ್ಪದಿಯಲ್ಲಿರಬೇಕೆಂದು ಸಂವಿಧಾನದಲ್ಲಿ ಹೇಳಿದ್ದಾರೆ. ಇದೀಗ ಆಸ್ಪತ್ರೆ, ಶಿಕ್ಷಣ ಖಾಸಗೀಕರಣವಾಗಿದೆ. ಸರ್ಕಾರಿ ಉದ್ದಿಮೆಗಳನ್ನು ಮಾರಲಾಗುತ್ತಿದೆ. ಮೀಸಲಾತಿ ವಂಚಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.
ಯಾವುದೇ ಬಗೆಯ ಅವಮಾನವಾದರೆ ಅಂಜಬಾರದು. ಅಳುಕದೆ ಪ್ರಶ್ನೆ ಮಾಡುವಂತೆ ಅಂಬೇಡ್ಕರ್ ಹೇಳಿದ್ದಾರೆ. ಅವರ ಮಾತುಗಳನ್ನು ನಮ್ಮ ಮಕ್ಕಳಿಗೆ ಹೇಳಬೇಕಿದೆ. ಸಂವಿಧಾನ ಉಳಿಸುವಂತೆ ತಿಳಿಸಬೇಕಿದೆ. ಸಂವಿಧಾನದ ನೆರಳು ಶಾಶ್ವತವಾಗಿ ಇರುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಭೀಮಯಾತ್ರೆ ಮಾಡುವವರು ಮನುಷ್ಯತ್ವದ ಯಾತ್ರೆ ಏಕೆ ಮಾಡಲಿಲ್ಲ. ದಲಿತರ ಸಂಕಟದ ಸಂಕಷ್ಟದ ಯಾತ್ರೆ ಏಕೆ ಮಾಡಲಿಲ್ಲ. ಬೇರೆ ಬೇರೆ ಹೆಸರಲ್ಲಿ ಯಾತ್ರೆ ಮಾಡುವುದು ತಲೆತಗ್ಗಿಸುವ ಸಂಗತಿ. ಮನುಷ್ಯ ಪರವಾದ ಯಾತ್ರೆಯ ಅಗತ್ಯವಿದೆ. ಅಂಬೇಡ್ಕರ್, ಗಾಂಧಿ, ಬುದ್ಧ, ಬಸವಣ್ಣ, ಕನಕದಾಸ ಎಲ್ಲರನ್ನೂ ಒಟ್ಟುಗೂಡಿಸಿ ಸಾಂಸ್ಕೃತಿಕ ಚಳವಳಿ ರೂಪಿಸಬೇಕಿದೆ ಎಂದು ಹೇಳಿದರು.
ಉಪನ್ಯಾಸಕಿ ಡಾ.ಪದ್ಮಶ್ರೀ ಮಾತನಾಡಿ, ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿದೆ. ನಮ್ಮೆಲ್ಲರಿಗೂ ಘನತೆಯಿಂದ ಬದುಕುವ, ವ್ಯಾಪಾರ ಮಾಡುವ ಅವಕಾಶಕ್ಕೆ ಧಕ್ಕೆ ಬಂದಿದೆ. ಸಮಸ್ಯೆಯನ್ನು ಮೂಲದಲ್ಲೇ ಗುರುತಿಸಿ ಪ್ರಶ್ನಿಸದಿದ್ದರೆ ಬಹುಸಂಖ್ಯಾತರು ಅಪಾಯಕ್ಕೆ ಸಿಲುಕಬೇಕಾಗುತ್ತದೆ ಎಂದರು.
ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಮುಖಂಡರಾದ ಶಂಭುಲಿಂಗಸ್ವಾಮಿ, ಕಲ್ಲಹಳ್ಳಿ ಕುಮಾರ್, ಬಿ.ಡಿ.ಶಿವಬುದ್ಧಿ, ಮಧುವನ ಕುಮಾರ್, ತಿಮ್ಮೇಗೌಡ, ಪ್ರಕಾಶ್ ಜಯನಗರ, ಶಿವು ಕಳಸ್ತವಾಡಿ, ಕೆ.ಸಿ.ಶ್ರೀನಿವಾಸ್, ಶಿವು, ಮಲ್ಲಿಕಾರ್ಜುನ, ರಮೇಶ, ಕೃಷ್ಣ ಹುರುಳಿಕ್ಯಾತನಹಳ್ಳಿ, ಚಂದನ್, ದಿಲೀಪ್, ಜೆ.ಪಿ.ರಾಜೇಶ್, ಸೋಮಣ್ಣ, ಜೋಗಿ ಹಾರೋಹಳ್ಳಿ ಇನ್ನಿತರರಿದ್ದರು.