

ಚಿತ್ರದುರ್ಗ: ರಾಜ್ಯ ಸರ್ಕಾರ ಶೀಘ್ರ ಜಾತಿ ಗಣತಿ ವರದಿ ಒಪ್ಪಿಕೊಳ್ಳಬೇಕು. ಈ ಮೂಲಕ ಎಲ್ಲ ವರ್ಗದ ಬಡವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವರದಿ ಅಂಗೀಕಾರದಿಂದ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆ, ಅಧಿಕಾರ ಬರುತ್ತವೆ, ಹೋಗುತ್ತವೆ. ವರದಿ ಅಂಗೀಕಾರದಿಂದ ಪಕ್ಷಕ್ಕೆ ದೇಶದಲ್ಲಿಯೇ ಒಳ್ಳೆಯ ಹೆಸರು ಜತೆಗೆ ಪಕ್ಷ ಬಲವರ್ಧನೆಗೆ ಅನುಕೂಲ ಆಗಲಿದೆ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದ್ದಾರೆ. ಈ ವರದಿ ಅಭಿವೃದ್ಧಿ ಕೈಗನ್ನಡಿಯಾಗಲಿದೆ ಎಂದರು.
ಅವಕಾಶ, ಅಧಿಕಾರಕ್ಕಾಗಿ ನಾನೆಂದು ಲಾಬಿ ಮಾಡಿಲ್ಲ. ನನಗೆ ಈವರೆಗೂ ದೊರೆತಿರುವ ಎಲ್ಲ ಸ್ಥಾನಮಾನಗಳು ನನ್ನನ್ನು ಹುಡುಕಿ ಬಂದಿವೆ. ಲೋಕಸಭೆ ಚುನಾವಣೆ ಟಿಕೆಟ್‌ಗೆ ನಾನಂತೂ ಅರ್ಜಿ ಹಾಕುವುದಿಲ್ಲ. ಒಂದು ವೇಳೆ ಪಕ್ಷ ಟಿಕೆಟ್ ಕೊಟ್ಟರೆ ಎಂಬ ಪ್ರಶ್ನೆ ಅಪ್ರಸ್ತುತ, ಅದಕ್ಕೆ ಉತ್ತರಿಸುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಈಗಾಗಲೇ ಸಮೀಕ್ಷೆ ಆರಂಭಿಸಿದೆ. ಅಭಿಪ್ರಾಯ ಸಂಗ್ರಹಿಸುತ್ತಿದೆ. ದೇಶದ ಅಭಿವೃದ್ಧಿ, ಅಭಿವ್ಯಕ್ತಿ ಸ್ವಾತಂತ್ರೃಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಬದಲಾಗಬೇಕಿದೆ. ಗ್ಯಾರಂಟಿಗಳಿಂದಾಗಿ ಮೋದಿ ತತ್ತರಿಸಿದ್ದಾರೆ ಎಂದು ಹೇಳಿದರು.
*22ರಂದು ಸನ್ಮಾನ: ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಹಾಗೂ ಎಂ.ಜಯಣ್ಣ ಸ್ಮಾರಕ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಅ.22ರಂದು ರಾಜ್ಯಸಭಾ ಸದಸ್ಯ, ಸಿಡಬ್ಲೃಡಿ ಮೆಂಬರ್ ಡಾ.ಸೈಯದ್ ನಾಸೀರ್ ಹುಸೇನ್ ಅವರನ್ನು ನಗರದ ತರಾಸು ರಂಗಮಂದಿರದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ಸಚಿವರಾದ ಎಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ.ನಾಗೇಂದ್ರ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ವಕೀಲರಾದ ಜಯಣ್ಣ, ಚಂದ್ರಣ್ಣ, ಜಿಪಂ ಮಾಜಿ ಸದಸ್ಯ ನರಸಿಂಹಮೂರ್ತಿ, ಸೈಯದ್ ಅಲ್ಲಾಭಕ್ಷಿ, ಅಬ್ದುಲ್ಲಾ ಇತರರು ಇದ್ದರು.