ಜಾತಿ ಗಣತಿ ವರದಿ ಬಿಡುಗಡೆ ಮಾಡಿ

oppo_2
oppo_2
Published on

ಕಲಬುರಗಿ: ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ನ್ಯಾ.ಎಚ್.ಕಾಂತರಾಜ ನೇತೃತ್ವದಲ್ಲಿ ನೀಡಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವರದಿಯನ್ನು ಸ್ವೀಕರಿಸಿದ್ದು, ಅದನ್ನು ಬಿಡುಗಡೆ ಮಾಡಲು ಆಗ್ರಹಿಸಿ ಬೆಳಗಾವಿಯಲ್ಲಿ ಡಿ.೧೮ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ತಿಳಿಸಿದರು.

೧೯೩೧ರ ನಂತರ ದೇಶದಲ್ಲಿ ಯಾವುದೇ ರಾಜ್ಯ ಜಾತಿ ಜನಗಣತಿ ಮಾಡಿಲ್ಲ. ಆದರೆ ೨೦೧೬ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ೧೬೫ ಕೋಟಿ ರೂ. ಖರ್ಚು ಮಾಡಿ, ಆಯೋಗ ರಚಿಸಿ, ಜಾತಿ ಜನಗಣತಿ ಮಾಡಿಸಿದ್ದಾರೆ. ವರದಿ ಸ್ವೀಕರಿಸಿದ್ದು, ಬಿಡುಗಡೆ ಮಾಡಿ ಅನುಷ್ಠಾನ ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಮೀಕ್ಷಾ ವರದಿಯ ಬಿಡುಗಡೆಗೆ ಹಲವು ಮುಂದುವರಿದ ಜಾತಿ, ಜನಾಂಗದವರು ಸಭೆಗಳನ್ನು ಮಾಡಿ, ವಿರೋಧಿಸುತ್ತಿರುವುದು ಖಂಡನೀಯ. ಸತತ ಒತ್ತಾಯದಿಂದ ಅಕ್ಟೋಬರ್ ೨೪ರಂದು ಹಿಂದುಳಿದ ಜಾತಿಗಳ ಒಕ್ಕೂಟವೂ ಸಿಎಂಗೆ ಮನವಿ ಸಲ್ಲಿಸಿ, ಒತ್ತಡ ಹೇರಿದ್ದರೂ, ಬಿಡುಗಡೆ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ರಾಜ್ಯದಲ್ಲಿ ಮುಂದುವರಿದ, ಬಲಿಷ್ಠ ಸಮುದಾಯದವರು ಹಿಂದುಳಿದ ವರ್ಗದ ಮೀಸಲಾತಿ ಪ್ರವರ್ಗ ೨ನಲ್ಲಿ ಸೇರ್ಪಡೆ ಮಾಡಬೇಕು ಎಂದು ಹಲವು ಕಾನೂನು ವಿರೋಧಿ, ಬ್ಲಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಮಣಿಯದೇ ನಿಜವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.

೨ಎನಲ್ಲಿರುವ ಈಡಿಗ, ಅಗಸ, ಮಡಿವಾಳ, ಸವಿತಾ, ಕುಂಬಾರ, ಕಮ್ಮಾರ, ವಿಶ್ವಕರ್ಮ, ನೇಕಾರ, ನಾಮದಾರಿ, ತಿಗಳ, ದೇವಾಡಿಗ, ಕುರುಬ ಸೇರಿ ೧೦೨ ಜಾತಿಗಳು ಇವೆ. ಇಲ್ಲಿ ಶೇ.೧೫ ಮೀಸಲು ಇದೆ. ಇದರಲ್ಲಿಯೇ ಬಲಿಷ್ಠ ಸಮುದಾಯ ಸೇರಿದರೆ, ಎಲ್ಲ ೧೦೨ ಜಾತಿಗಳವರಿಗೆ ಅನ್ಯಾಯವಾಗಲಿದೆ. ಯಾವುದೇ ವರದಿ ಇಲ್ಲದೆ ಮೀಸಲಿಗೆ ಆಗ್ರಹಿಸುತ್ತಿದ್ದು, ಸರ್ಕಾರ ಅನ್ಯಾಯ ಮಾಡಬಾರದು ಎಂದರು.

ಎಲ್ಲ ಬೇಡಿಕೆ ಈಡೇರಿಸಲು ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಹಿಂದುಳಿದ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಸಂಜುಕುಮಾರ ಜೀವರಕರ್, ಕುಮಾರ ಯಾಧವ, ಶರಣು ಸೂರ್ಯವಂಶಿ, ಹಣಮಯ್ಯ ಆಲೂರ, ಸಾಯಬಣ್ಣ ಹೆಳವರ, ನಿಂಗಪ್ಪ ಹೇರೂರ, ಚಂದು ಪವಾರ, ಸ್ವಾಮಿ ಬುರಬುರೆ, ಸೂರ್ಯಕಾಂತ ಬೆಣ್ಣೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net