

ಕಲಬುರಗಿ: ರಾಜ್ಯದಲ್ಲಿ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ಆರೋಗ್ಯ, ಶೈಕ್ಷಣಿಕ, ಔದ್ಯೋಗಿಕ ಸಮೀಕ್ಷೆಯ ವರದಿಯನ್ನು ಅನುಷ್ಠಾನ ಮಾಡಬೇಕು ಎಂದು ರಾಷ್ಟ್ರೀಯ ಸಮಾಜ ಪಕ್ಷದ ಉಪಾಧ್ಯಕ್ಷ ಶಿವಲಿಂಗಪ್ಪ ಕಿನ್ನೂರ ಆಗ್ರಹಿಸಿದರು.
ಹಿಂದುಳಿದ ವರ್ಗಗಳಿಗೆ ಅನುಕೂಲಕ್ಕಾಗಿ ಈ ವರದಿ ಅನುಷ್ಠಾನ ಅಗತ್ಯವಾಗಿದೆ. ಒಬಿಸಿ ಸಮುದಾಯಗಳಿಗೆ ಸೌಲಭ್ಯ, ಮೀಸಲು ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ಗೆ ಹೋದರೆ ಅಲ್ಲಿ ಜನಸಂಖ್ಯೆಯ ಅಂಕಿ ಸಂಖ್ಯೆ ಕೇಳಲಾಗುತ್ತಿದೆ. ಆದ್ದರಿಂದ ವರದಿಯನ್ನು ಬಹಿರಂಗಪಡಿಸಬೇಕು, ವರದಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಜನಗಣತಿಯನ್ನು ನಡೆಸಬೇಕು. ಅದರಲ್ಲಿ ಜಾತಿವಾರು ಪ್ರತ್ಯೇಕ ಕಾಲಂ ಸೇರಿಸಬೇಕು. ೩೭೧ ಜೆ ಮೀಸಲು ಅನ್ವಯ ಓಬಿಸಿ ಮತ್ತು ಎಂಬಿಸಿ ರೋಸ್ಟರ್‌ನಲ್ಲಿ ಅನ್ಯಾಯ ಸರಿಪಡಿಸಬೇಕು, ಒಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪ್ರವೇಶಕ್ಕೆ ಬಯೋ ಮೆಟ್ರಿಕ್ ಕಡ್ಡಾಯವಾಗಿದ್ದು, ಸರ್ವರ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಶರಣಬಸಪ್ಪ ದೊಡ್ಡಮನಿ, ಮನುಬಾಯಿ ಮುಕ್ಕಾ, ದೇವಿಂದ್ರಪ್ಪ ಚಿಗರಳ್ಳಿ, ಭೀಮರಾವ ಕಟ್ಟಿಮನಿ, ಶ್ರೀಮಂತ ಮಾವನೂರ, ಮಹಾಂತೇಶ ದೊಡ್ಡಮನಿ ಇತರರಿದ್ದರು.