

ಚಿತ್ರದುರ್ಗ: ಒಳ ಮೀಸಲಾತಿ ಜಾರಿ ಸಂಬಂಧ ರಾಜ್ಯ ಸರ್ಕಾರದಿಂದ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಮಾಹಿತಿ ದಾಖಲಿಸಲು ಬೆಂಗಳೂರಿನಲ್ಲಿ ಇರುವ ಎಸ್ಸಿ ಸಮುದಾಯದ ಹಲವರು ಮುಂದೆ ಬರುತ್ತಿಲ್ಲ. ಹೀಗಾಗಿ ಅಲ್ಲಿ ನೋಂದಣಿ ಕಾರ್ಯ ಮಂದಗತಿಯಲ್ಲಿ ಸಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬೇಸರಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕ್ರಿಯೆಗೆ ವೇಗ ನೀಡಲು ಅಲ್ಲಿನ ಎಲ್ಲ ವಿಧಾನಸಭಾ ಕ್ಷೇತ್ರದಲ್ಲೂ ಹಾಲಿ-ಮಾಜಿ ಸಚಿವರು, ಶಾಸಕರು, ಸಮುದಾಯದ ಮುಖಂಡರು ಹಲವೆಡೆ ಭೇಟಿ ನೀಡಿ ಜಾಗೃತಿಗೆ ಮುಂದಾಗಿದ್ದಾರೆ. ಇನ್ನೂ 10ಲಕ್ಷ ಕುಟುಂಬ ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಆಹಾರ ಇಲಾಖೆ ಎಸ್ಸಿ ಬದಲು ಎಸ್ಟಿ ಎಂಬುದಾಗಿ ಪಡಿತರ ಚೀಟಿಯಲ್ಲಿ ನಮೂದಿಸಿರುವ ಕಾರಣ ಹಲವೆಡೆ ಗೊಂದಲ ಉಂಟಾಗಿ ನೋಂದಣಿ ಸಾಧ್ಯವಾಗಿಲ್ಲ. ಈ ಕುರಿತು ಆಯೋಗಕ್ಕೆ ದೂರು ನೀಡಿದ ಮೇಲೆ ಅವಕಾಶ ಕಲ್ಪಿಸಲಾಗಿದೆ. ಇದರ ಪ್ರಯೋಜನ ಅರ್ಹರು ಪಡೆಯಬೇಕು ಎಂದರು.