ಜಾತಿ ಗಣತಿ ಬಗ್ಗೆ ನಿಖರ ಮಾಹಿತಿ ನೀಡಲು ಜಾಗೃತಿ ಜಾಥಾಗೆ ಚಾಲನೆ

06_HSN_05
Published on

ಹಾಸನ: ಒಳ ಮೀಸಲು ಜಾರಿಗಾಗಿ ಸೋಮವಾರದಿಂದ ಜಿಲ್ಲೆ ಸೇರಿ ರಾಜ್ಯಾದ್ಯಂತ ಆರಂಭವಾಗಿರುವ ಜಾತಿ ಗಣತಿ ವೇಳೆ 101 ಪರಿಶಿಷ್ಟ ಜಾತಿಗಳ ನಿಖರ ಮಾಹಿತಿ ದಾಖಲಿಸಲು ಜಾಗೃತಿ ಮೂಡಿಸಲು ಮಂಗಳವಾರದಿಂದ ಜಿಲ್ಲೆಯಲ್ಲಿ ಮಾದಿಗ ದಂಡೋರ ಸಮಿತಿ ಹಾಗೂ ಹೊಲೆಯ-ಮಾದಿಗ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಜಾಥಾ ಹಮ್ಮಿಕೊಂಡಿದೆ.

ಈ ವೇಳೆ ಸಮುದಾಯದ ಮುಖಂಡ ಕೆ. ಸಂದೇಶ್ ಮಾತನಾಡಿ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಜಾಥಾ ಜಿಲ್ಲಾದ್ಯಂತ ಸಂಚರಿಸಿ ಗಣತಿದಾರರಿಗೆ ಮೂಲ ಜಾತಿ ಹೇಳುವಂತೆ ಅರಿವು ಮೂಡಿಸಲಾಗುತ್ತದೆ. ಆಯಾ ಜಾತಿಗಳ ಜನರು ಮೂಲ ಜಾತಿಯ ಹೆಸರನ್ನೇ ನಮೂದಿಸಬೇಕು. ಮೊದಲ ಹಂತದಲ್ಲಿ ಮೇ 5-17 ರವರೆಗೆ ದತ್ತಾಂಶ ಸಂಗ್ರಹ ಕಾರ್ಯ ನಡೆಯಲಿದೆ. ಮೇ 19-21 ರ ವರೆಗೆ ಮತಗಟ್ಟೆ ಅಭಿಯಾನ ನಡೆಯಲಿದೆ. ಮೇ 19ರಿಂದ 23 ರವರೆಗೆ ಆನ್‌ಲೈನ್ ಮೂಲಕ ಜಾತಿ ನಮೂದಿಸಬಹುದು. ಈ ಸಮಯದಲ್ಲಿ ಯಾರೂ ಕೂಡ ದೂರ ಉಳಿಯದೆ ತಮ್ಮ ತಮ್ಮ ಮೂಲ ಜಾತಿ ನಮೂದಿಸಬೇಕು ಎಂದು ವಿನಂತಿಸಿದರು.

ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಗಿದೆ. ಇದು ಜಿಲ್ಲೆಯ ಪ್ರತಿಯೊಂದು ಹಳ್ಳಿ, ತಾಲೂಕುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಈ ವೇಳೆ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಟಿ.ಆರ್.ವಿಜಯಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಪೃಥ್ವಿ, ಎಂ.ಜಿ. ಚಂದ್ರಶೇಖರ್, ಸತೀಶ್, ಮಹದೇವ್, ರಮೇಶ್, ರವೀಶ್, ತಿರುಪತಿಹಳ್ಳಿ ದೇವರಾಜು, ನಿವೃತ್ತ ಎಇಇ ದೇವರಾಜು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net