

ಚಿತ್ರದುರ್ಗ: ಒಳ ಮೀಸಲಾತಿ ಜಾರಿ ಸಂಬಂಧ ನಡೆಯುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಈಗ ಜನಿಸಿದ ಮಗುವನ್ನು ಕೂಡ ನೋಂದಾಯಿಸಲು ಪಾಲಕರು ಮುಂದಾಗಬೇಕು ಎಂದು ಎಸ್ಸಿ ಸಮುದಾಯದವರಿಗೆ ಮಾಜಿ ಸಚಿವ ಎಚ್. ಆಂಜನೇಯ ಸಲಹೆ ನೀಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆ-ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಪರಿಶಿಷ್ಟ ಜಾತಿಯವರು ತಮ್ಮ ಬೂತ್ ಮಟ್ಟದಲ್ಲಿ ತಪ್ಪದೇ ದಾಖಲಾತಿ ನೋಂದಾಯಿಸಬೇಕು. ಇದರಿಂದ ಒಳ ಮೀಸಲಾತಿ ಹಂಚಿಕೆ, ಸೌಲಭ್ಯ ಪಡೆಯಲು ಸಹಕಾರಿ ಆಗಲಿದೆ ಎಂದರು.
ಮನೆ ಬಾಡಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಸುಳ್ಳು ಜಾತಿಯ ಹೆಸರೇಳಿ ಮನೆ ಬೀಗ ಹಾಕಿಕೊಂಡು ಹೋದವರು, ಆನ್‌ಲೈನ್ ಮೂಲಕ ತಮ್ಮ ಮೂಲ ಜಾತಿಯನ್ನು ಕುಟುಂಬದ ವಿವರದೊಂದಿಗೆ ನೋಂದಾಯಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ರಾಜ್ಯದ ಬಹುತೇಕ ವಿಶ್ವವಿದ್ಯಾಲಯ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು ಗಣತಿಯಲ್ಲಿ ತಮ್ಮ ಮೂಲ ಜಾತಿಯ ಮಾಹಿತಿ ನಮೂದಿಸದೆ, ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಅಂತವರ ವಿರುದ್ಧ ಸರ್ಕಾರ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ನಮ್ಮ ಸಮುದಾಯದಲ್ಲಿ ಕಸ ಗುಡಿಸುವ ವೃತ್ತಿಯಲ್ಲಿ ಹಲವರಿದ್ದಾರೆ. 'ಎ'ಯಿಂದ 'ಡಿ' ಗ್ರೂಪ್ ನೌಕರರವರೆಗೂ ವರ್ಗಾವಾರು ಎಲ್ಲರೂ ಕಡ್ಡಾಯವಾಗಿ ಮೂಲ ಜಾತಿಯ ಮಾಹಿತಿ ದಾಖಲಿಸಲು ಸರ್ಕಾರ ಆದೇಶಿಸಬೇಕು ಎಂದು ಕೋರಿದರು.
ಈವರೆಗೂ ಮೀಸಲಾತಿ ಸಿಕ್ಕಿಲವೆಂದು ಹೇಳುತ್ತ ಬಂದಿದ್ದು, ಕೆಲವೇ ದಿನಗಳಲ್ಲಿ ಅದು ನನಸಾಗಲಿದೆ. ಒಳ ಮೀಸಲಾತಿ ರಾಜ್ಯದಲ್ಲಿ ಜಾರಿಯಾದರೆ, ಸರ್ಕಾರಿ ಉದ್ಯೋಗದ ಕನಸು ಕಂಡ 40 ವರ್ಷ ಪೂರ್ಣಗೊಂಡವರು ವಂಚಿತರಾಗಲಿದ್ದಾರೆ. ಅದಕ್ಕಾಗಿ ಖಾಲಿ ಹುದ್ದೆ ಭರ್ತಿ ಸಂಬಂಧ ಕನಿಷ್ಠ ಒಂದು ವರ್ಷವಾದರೂ ವಯೋಮಿತಿ ಸಡಿಲಿಕೆಗೆ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಓ.ಶಂಕರ್, ಬಿ.ಪಿ.ತಿಪ್ಪೇಸ್ವಾಮಿ, ಸಮರ್ಥ್, ವಕೀಲ ರವಿ ಇತರರಿದ್ದರು.