

ಚಿತ್ರದುರ್ಗ: ಸಮುದಾಯದವರು ಜಾತಿ ಕಾಲಂನಲ್ಲಿ ಲಿಂಗಾಯತರೆಂದೇ ಬರೆಸಬೇಕು. ಬಿಡುಗಡೆಯಾಗದ ಜಿಲ್ಲೆಗಳಲ್ಲಿ ವಚನ ದರ್ಶನ, ಮಿತ್ಯ ವರ್ಸಸ್ ಸತ್ಯ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಬೇಕು. ವಾರ್ಷಿಕ ವಿಶೇಷ ಮಹಾಸಮ್ಮೇಳನ, ವಧು-ವರರ ಸಮಾವೇಶ ಒಂದೆಡೆ ಆಯೋಜಿಸಬೇಕೆಂಬ ಪ್ರಮುಖ ವಿಷಯಗಳು ಚರ್ಚೆಯ ಮುನ್ನಲೆಗೆ ಬಂದವು.
ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಗತಿಕ ಲಿಂಗಾಯತ ಮಹಾಸಭಾದ 2025-26ನೇ ಸಾಲಿನ ಮೊದಲ ಕಾರ್ಯಕಾರಿ ಸಭೆಯಲ್ಲಿ 13 ವಿಷಯಗಳ ಕುರಿತು ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಯಿತು.
ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ್ ಜಾಮದಾರ್ ವಿಷಯ ಮಂಡಿಸಿ, ಶರಣರ ಐತಿಹಾಸಿಕ ಸತ್ಯ ಮತ್ತು ನಿಲುವುಗಳು ಸಾರ್ವಜನಿಕರಿಗೆ, ಬಸವಾಭಿಮಾನಿಗಳಿಗೆ ಅರ್ಥೈಸುವ ಅನಿವಾರ್ಯತೆ ಇದೆ ಎಂದರು.
ರಾಜ್ಯ ಸರ್ಕಾರ ಮುಂದೆ ನಡೆಸಲಿರುವ ಜಾತಿ ಮರು ಜನಗಣತಿಯ ವೇಳೆ ಜಾತಿ ಕಾಲಂನಲ್ಲಿ ಲಿಂಗಾಯತರೆಂದೇ ಬರೆಸಿ. ಒಳಪಂಗಡಗಳ ಕುರಿತು ಮುಂದಿನ ದಿನಗಳಲ್ಲಿ ಚರ್ಚಿಸೋಣ. ಲಿಂಗಾಯತ ಮಠಾಧೀಶರ ಒಕ್ಕೂಟದಡಿ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 1ರವರೆಗೆ ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನ ಸಫಲಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ಜಿಲ್ಲೆಯಲ್ಲಿ ವಧು-ವರರ ಮಾಹಿತಿ ಕೇಂದ್ರ ಸ್ಥಾಪಿಸಬೇಕು. ಈ ಮೂಲಕ ಕಲ್ಯಾಣವಾಗ ಬಯಸುವವರಿಗೆ ನೆರವಾಗಬೇಕು. ಆನ್‌ಲೈನ್ ಮಾಸ ಪತ್ರಿಕೆಗೆ ಲೇಖನಗಳು, ಸಭಾ ನಡೆಸುವ ಕಾರ್ಯಕ್ರಮಗಳ ವರದಿಗಳನ್ನು ಸಮುದಾಯಕ್ಕೆ ತಲುಪಿಸುವ ಕಾರ್ಯವಾಗಬೇಕು ಎಂದು ಕೋರಿದರು.
ಸದೃಢ ಸಮ ಸಮಾಜ, ವ್ಯಸನ ಮುಕ್ತ ನಾಡು, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡಿಸುವುದು, ಮಹಿಳೆಯರ ಘನತೆ ಕಾಪಾಡುವುದು ಸೇರಿ ವ್ಯಕ್ತಿತ್ವ ವಿಕಸನ ಇನ್ನಿತರೆ ವಿಷಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆದವು.
ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಡಾ. ಬಸವಪ್ರಭು ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ನಿವೃತ್ತ ನ್ಯಾಯಾಧೀಶ ಎನ್. ಕೆಂಪೇಗೌಡ, ಮಹಾಸಭಾದ ಪದಾಧಿಕಾರಿಗಳಾದ ಬಸವರಾಜ ರೊಟ್ಟಿ, ಮಾದೇವಪ್ಪ, ಬಸವರಾಜ ಧನ್ನೂರ್, ಪರಮೇಶ್ವರ ಕಾಗಿನೆಲೆ, ಬಸವರಾಜ ಕಣಜೆ, ಡಾ.ಜೆ.ಎಸ್. ಪಾಟೀಲ, ಸವಿತಾ ನಡಕಟ್ಟಿ, ನಳಿನಿ ಮಹಾಗಾವಕರ್, ಶೈಲಜಾ ಬಾಬು, ಅಶೋಕ ಮಳಗಲಿ, ಮುರಿಗೆಪ್ಪ ಬಾಳಿ, ಚಂದ್ರಶೇಖರ್ ಗುಡಸಿ, ಬಸನಗೌಡ ಹರನಾಳ ಇತರರಿದ್ದರು.