

ಹರಪನಹಳ್ಳಿ: ರಾಜ್ಯದಲ್ಲಿ ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಜಾತಿ ಕಾಲಂ (9)ರಲ್ಲಿ ಬೆಸ್ತರ್ ಎಂದು ನಮೂದಿಸಿ ಎಂದು ಮೀನುಗಾರಿಕೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಪವಾಡಿ ಬಸವರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಗಂಗಾಮತ ಸಮಾಜದ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಜಾತಿ ಮತ್ತು ವೃತ್ತಿ ಹೇಳಿಕೊಳ್ಳಲು ಮುಜುಗರ ಪಟ್ಟಕೊಳ್ಳಬಾರದು. ನಾವು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅದಕ್ಕೆ ಸಮಾಜದ ಕೊಡುಗೆ ಇರುತ್ತದೆ ಎಂದರು.
ನಿವೃತ್ತ ಎಇಇ ಸಿ.ಗಂಗಾಧರ ಮಾತನಾಡಿ, ಹಲವಾರು ಉಪಪಂಗಡಗಳ ಹೆಸರಿನಲ್ಲಿ ಜಾತಿಪ್ರಮಾಣ ಪತ್ರ ಪಡೆಯುತ್ತಾ ಬಂದಿರುವ ನಾವು ಸಮೀಕ್ಷೆಯಲ್ಲಿ ತಪ್ಪದೆ ಬೆಸ್ತರ್ ಎಂದು ಬರೆಸಬೇಕು. ಇದರಿಂದ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಈ ಮೂಲಕ ಭವಿಷ್ಯದ ಪೀಳಿಗೆಗೆ ಸರ್ಕಾರಿ ಸೌಲಭ್ಯ ಸಿಗಲು ಸಹಕಾರಿಯಾಗಲಿದೆ ಎಂದರು.
ಪ್ರಮುಖರಾದ ಅಣಜೀಗೆರೆ ನಿಂಗಣ್ಣ, ಉಚ್ಚಂಗಿದುರ್ಗ ಚೌಡಪ್ಪ, ಗರ್ಭಗುಡಿ ಮಂಜುನಾಥ, ಅರಸೀಕೆರೆ ಬಸವರಾಜ್, ಹುಲಿಕಟ್ಟಿ ಭಾಗ್ಯಮ್ಮ ಇತರರಿದ್ದರು.