ಜಾಗೃತಿಯಿಂದ ಸಮಾಜ ಬದಲಾವಣೆ

17 Jaggu 8
ಬೆಳಗಾವಿ ಶಿವಬಸವ ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಸಿಡಿಪಿಒ ಕೆ.ವಿ. ರಾಮಮೂರ್ತಿ ಉದ್ಘಾಟಿಸಿದರು. ಡಾ.ಎ.ಎಲ್. ಪಾಟೀಲ, ಸೇಂಥಿಲ್ ಕುಮಾರ, ವೈಜಯಂತಿ ಚೌಗಲಾ ಇದ್ದರು.
Published on

ಬೆಳಗಾವಿ: ನಾವು ಸಮಾಜದ ಕಟ್ಟುಪಾಡುಗಳಿಗೆ ಹೊಂದಿಕೊಂಡು ಬದುಕುತ್ತಿದ್ದೇವೆ. ನಮ್ಮ ಸುತ್ತ ನಡೆಯುತ್ತಿರುವ ಆಗು- ಹೋಗುಗಳ ಕುರಿತು ನಿಜವಾಗಿ ಜಾಗೃತಿ ವಹಿಸಿದಾಗ ಮಾತ್ರ ಬದಲಾವಣೆ ತರಲು ಸಾಧ್ಯ. ಮಾನವ ಕಳ್ಳ ಸಾಗಣೆ ಕೋಟ್ಯಂತರ ರೂಪಾಯಿ ವ್ಯವಹಾರದ ಮಾರುಕಟ್ಟೆಯಾಗಿ ಪರಿಣಮಿಸಿದೆ ಎಂದು ಸಿಡಿಪಿಒ ಕೆ.ವಿ. ರಾಮಮೂರ್ತಿ ಹೇಳಿದರು.

ಇಲ್ಲಿನ ಶಿವಬಸವ ನಗರದ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಸೋಮವಾರ ಬೆಂಗಳೂರಿನ ಓಯಸಿಸ್ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ, ಬಾಲ್ಯ ವಿವಾಹ, ಪೋಕ್ಸೋ ಹಾಗೂ ಡಿಜಿಟಲ್ ಸಾಕ್ಷರತೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಹಾರನಂತಹ ರಾಜ್ಯದಲ್ಲಿ ಸೈಬರ್ ಕೃತ್ಯಗಳು ಹೆಚ್ಚಾಗುತ್ತಿರುವುದನ್ನು ನೋಡಬಹುದು. ತಂತ್ರಜ್ಞಾನ ಬೆಳೆದಂತೆಲ್ಲ ಡಿಜಿಟಲ್ ವಂಚನೆಗಳೂ ಆಗುತ್ತಿವೆ. ಈ ಬಗ್ಗೆ ಜಾಗೃತಿ ಹೊಂದುವುದು ಅವಶ್ಯ ಎಂದರು.

ಬೆಳಗಾವಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಎ.ಎಲ್. ಪಾಟೀಲ ಮಾತನಾಡಿ, ಬಾಲ್ಯ ವಿವಾಹ, ಪೋಕ್ಸೋ, ಮಾನವ ಕಳ್ಳ ಸಾಗಣೆ ಏನೆಂದು ತಿಳಿಯದ ಕಾಲವಿತ್ತು. ಆದರೆ, ಈಗ ಎಲ್ಲರೂ ಇದರ ಬಗ್ಗೆ ಅರಿವು ಹೊದಿರಲೇಬೇಕಾಗಿದೆ ಎಂದರು. ಓಯಸಿಸ್ ಸಂಸ್ಥೆಯ ಕಮ್ಯೂನಿಟಿ ಡೆವಲಪ್ಮೆಂಟ್ ಸೋಶಿಯಲ್ ವರ್ಕರ್ ಸೇಂಥಿಲ್ ಕುಮಾರ ಮಾತನಾಡಿ, ಬೆಳಗಾವಿಯಂತಹ ಗಡಿ ಭಾಗಗಳಲ್ಲಿ ಮಾನವ ಕಳ್ಳ ಸಾಗಣೆ ಕಾಣಬಹುದು. ಇಷ್ಟು ಜಾಗೃತಿ ಕಾರ್ಯಕ್ರಮಗಳ ನಂತರವೂ ಈ ಕೃತ್ಯ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ಇದನ್ನು ಸಂಘಟಿತರಾಗಿ ತಡೆಯಬೇಕಿದೆ ಎಂದು ಹೇಳಿದರು.

ಮಹಿಳಾ ಕಲ್ಯಾಣ ಸಂಸ್ಥೆ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ, ಕೆ.ಪಿ.ಎಸ್.ಯರಗಟ್ಟಿ ಶಾಲೆಯ ಪ್ರಾಂಶುಪಾಲ ಕಿರಣ ಎಂ.ಚೌಗಲಾ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕ ಆರ್.ಜೆ.ಚೇತನ, ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net