ಜಾಗೃತಿಗೆ ಸಾರ್ವತ್ರಿಕ ಆರೋಗ್ಯ ಆಂದೋಲನ

11 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾರ್ವಜನಿಕರಿಗೆ ಸರ್ಕಾರಗಳು ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಜತೆಗೆ ಅಲ್ಲಿನ ಔಷಧಾಲಯದಲ್ಲೇ ಎಲ್ಲ ಔಷಧಿ ಸಿಗುವಂತಾಗಬೇಕು. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಆರೋಗ್ಯ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಎಕೆ ಮುಖಂಡ ಡಾ. ಗೋಪಾಲ ದಾಬಡೆ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ ರಾಜ್ಯ ಮಟ್ಟದ ಸಂಘಟನೆ. ಇದರಲ್ಲಿ ಹಕ್ಕು ಆಧಾರಿತ ನಾಗರಿಕ ಸಂಘಟನೆಗಳು, ಆರೋಗ್ಯ ಅಧ್ಯಯನಕಾರರು ಮತ್ತು ಇತರ ಕಾರ್ಮಿಕ ಸಂಘಟಗಳು ಸೇರಿವೆ. ಹೀಗಾಗಿ ಸಮಾಜದಲ್ಲಿನ ಎಲ್ಲ ವ್ಯಕ್ತಿಗೆ ಸರ್ಕಾರ ನೀಡುವ ಆರೋಗ್ಯ ಸೇವೆ ಗುಣಮಟ್ಟದ ಮತ್ತು ಪರಿಪೂರ್ಣವಾಗಿರಬೇಕು. ಆದರೆ, ಬಹುತೇಕ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಹೊರಗಡೆ ಬರೆದು ಕೊಟ್ಟು ಬಡವರಿಗೆ ಆರ್ಥಿಕ ಹೊರೆ ಮಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಒದಗಿಸುವ ಉದ್ದೇಶಕ್ಕೆ ಸ್ಥಾಪಿಸಿರುವ ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆ ತನ್ನ ಕಾರ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಸಂಸ್ಥೆಗೆ ರಾಜಕೀಯ ನಾಯಕರ ಹಸ್ತಕ್ಷೇಪವಿಲ್ಲದೆ ಐಎಎಸ್ ಮಟ್ಟದ ಅಧಿಕಾರಿ ನೇಮಿಸಬೇಕು. ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯಾಗಿ ಮಾರ್ಪಡಿಸಬೇಕು. ಎಲ್ಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಫಾರ್ಮಸಿಸ್ಟ್‌ಗಳ ಹುದ್ದೆ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಅಶೋಕ ಯರಗಟ್ಟಿ, ಬಿ.ವಿ. ಪೂಜಾರ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net