ಜಾಗೃತಿ ಜಾಥಕ್ಕೆ ಡಿಎಚ್‌ಒ ಬಿ.ಎಂ. ಶಿವಸ್ವಾಮಿ ಚಾಲನೆ

ಜಾಗೃತಿ ಜಾಥಕ್ಕೆ ಡಿಎಚ್‌ಒ ಬಿ.ಎಂ. ಶಿವಸ್ವಾಮಿ ಚಾಲನೆ
Published on

ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಇರುವ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಎಂ. ಶಿವಸ್ವಾಮಿ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಶಿವಸ್ವಾಮಿ ಅವರು, ಸಮಾಜದ ಬಗ್ಗೆ ಕಳಕಳಿಯನ್ನಿಟ್ಟುಕೊಂಡು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ಒಳ್ಳೆಯ ಬೆಳೆವಣಿಗೆ. ರಕ್ತದಾನ ಮಾಡುವುದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆಯೇ ಹೊರತು ಹಾಳಾಗುವುದಿಲ್ಲ. ಆರೋಗ್ಯಕರ ಮನುಷ್ಯ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಜತೆಗೆ ರಕ್ತದಾನ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಗೆ ಹೋಗಿ ನಮ್ಮ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗುವ ಮೂಲಕ ಆರೋಗ್ಯ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಇಂತಹ ಸೇವಾ ಕಾರ್ಯಗಳನ್ನು ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ಜಿಲ್ಲಾ ಏಡ್ಸ್ ಮತ್ತು ಕ್ಷಯಾ ನಿಯಂತ್ರಣಾಧಿಕಾರಿ ಡಾ. ಬಿ. ಸಂದ್ಯಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಕ್ತದ ಸಂಗ್ರಹ ತೀರಾ ಕಡಿಮೆ ಇದ್ದು, ಸರಕಾರಿ ಆಸ್ಪತ್ರೆಯಲ್ಲಿ ಬಹಳ ಜನರಿಗೆ ತೊಂದರೆ ಆಗುತ್ತಿದೆ. ಸ್ವಯಂ ಪ್ರೇರಿತ ರಕ್ತದಾನ ಮಾಡಲು ಯುವಕ-ಯುವತಿಯರು ಬಂದಿರುವುದು ಉತ್ತಮ ಬೆಳೆವಣಿಗೆಯಾಗಿದೆ. ನಿಮ್ಮಿಂದ ನೂರಾರು ಜನರ ಪ್ರಾಣ ಉಳಿಯಲಿದೆ ಎಂದರು.

ಎಲ್ಲಾವನ್ನು ಕೃತಕವಾಗಿ ತಯಾರಿಸಬಹುದು. ಆದರೆ, ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಭಾರತದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚಿನ ಯೂನಿಟ್‌ಗಳ ರಕ್ತದ ಕೊರತೆಯನ್ನು ಕಾಣುತ್ತಿದ್ದೇವೆ. ರಕ್ತದಾನದ ಬಗ್ಗೆ ಒಬ್ಬರಿಂದ ಮತ್ತೊಬ್ಬರಿಗೆ ಅರಿವು ಮೂಡಿಸಿ ಧೈರ್ಯ ತುಂಬುವ ಕೆಲಸ ಮಾಡಬೇಕು. ರಕ್ತ ಕೊಟ್ಟವರಿಗೆ ಹೆಚ್ಚಿನ ಪ್ರಯೋಜನಗಳು ಇದೆ. ರಕ್ತದಾನದಿಂದ ಹೃದಯಾಘಾತ, ಕ್ಯಾನ್ಸರ್, ರಕ್ತದ ಒತ್ತಡ ಕಡಿಮೆ ಮಾಡಬಹುದು ಎಂದು ಹೇಳಿದರು.

ಹೆಚ್ಚು ಬಾರಿ ರಕ್ತದಾನ ಮಾಡಿರುವ ಜಿ.ಎಂ. ರವಿ, ಧನುಷ್, ಆನಂದ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಾಥದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮೇಲ್ವಿಚಾರಕರಾದ ಬಿ.ಎಂ. ರವಿಕುಮಾರ್, ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ. ನಾಗೇಶ್, ರೋಟರಿ ಟೈಗರ್ ಅಧ್ಯಕ್ಷ ರಘುಗೌಡ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಎಚ್.ಸಿ. ಚೇತನ್, ಎಂ.ಕೆ. ಹರೀಶ್, ಶಿವಶಂಕರ್, ನಾಗಪ್ಪ, ಮಧು ಇತರರು ಉಪಸ್ಥಿತರಿದ್ದರು.

----

ಫೋಟೋ ಶೀರ್ಷಿಕೆ

10 ಎಚ್‌ಎಸ್‌ಎನ್ 07

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಗೃಹ ವಿಜ್ಞಾನ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನಕ್ಕೆ ಡಿಎಚ್‌ಒ ಬಿ.ಎಂ. ಶಿವಸ್ವಾಮಿ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಮಂಗಳವಾರ ಚಾಲನೆ ನೀಡಿದರು. ಈ ವೇಳೆ ಡಾ. ಬಿ. ಸಂದ್ಯಾ, ಬಿ.ಎಂ. ರವಿಕುಮಾರ್, ಲೀಲಾವತಿ, ಎಚ್.ಕೆ. ನಾಗೇಶ್, ರಘುಗೌಡ, ಎಚ್.ಸಿ. ಚೇತನ್, ಎಂ.ಕೆ. ಹರೀಶ್, ಶಿವಶಂಕರ್, ನಾಗಪ್ಪ, ಮಧು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net