ಜಾಗೃತ ಹಿಂದು ಸಮಾಜ ನಿರ್ಮಾಣವಾಗಲಿ

1008 KLB 04
ಕಲಬುರಗಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಏರ್ಪಡಿಸಿದ್ದ ರಕ್ಷಾಬಂಧನ ಉತ್ಸವದಲ್ಲಿ ಪ್ರಾಧ್ಯಾಪಕ ಚಂದ್ರಕಾಂತ ಯಾತನೂರ ಮಾತನಾಡಿದರು. ನರೇಂದ್ರ, ಗಿರೀಶ್ ಹೆಬ್ಬಾರ್ ಇದ್ದರು.
Published on

ಕಲಬುರಗಿ: ಸದಾ ಜಾಗೃತ ಹಿಂದೂ ಸಮಾಜ ನಿರ್ಮಾಣ ಸಂಘದ ಸಂಸ್ಥಾಪಕ ಡಾಕ್ಟರ್‌ಜೀ ಕನಸಾಗಿತ್ತು. ದೇಶ, ಸಮಾಜದ ಕುರಿತು ಚಿಂತನೆ ಮಾಡುವವರ ಸಂಖ್ಯೆ ಹೆಚ್ಚಬೇಕು ಎಂಬುದು ಸಂಘದ ಮೂಲ ವಿಚಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕ ನರೇಂದ್ರ ಹೇಳಿದರು.

ಹೊಸ ಜೇವರ್ಗಿ ರಸ್ತೆಯ ಖಾಸಗಿ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ಆಯೋಜಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಹಾಯಕ್ಕೆ ಧಾವಿಸುವ ಗುಣ ಬಂದಾಗ ಸಾಮರಸ್ಯ ಬೆಳೆಯಲಿದೆ. ಸಂಘ ಹಿಂದು ಸಮಾಜ ಸಂಘಟನೆ, ಭಾರತ ಮಾತೆಯ ಪರಮ ವೈಭವದ ಸ್ಥಿತಿ ಗುರಿ ಇಟ್ಟುಕೊಂಡಿದೆ. ಸಿಕ್ಕ ಸ್ವಾತಂತ್ರ್ಯ ಉಳಿಸಲು ಡಾಕ್ಟರ್ ಜೀ ಸಂಘ ಪ್ರಾರಂಭಿಸಿದ್ದರು. ಹಣಕ್ಕೆ ಯಾವ ರೀತಿ ಬಂಡವಾಳ ಬೇಕೋ, ಅದೇ ಮಾದರಿ ಗುಣಕ್ಕೂ ಬಂಡವಾಳದ ಅಗತ್ಯವಿದೆ. ಸಂಘ ೧೦೦ ವರ್ಷದಿಂದ ಗುಣಗಳನ್ನು ಬಂಡವಾಳ ಮಾಡಿ ಬೆಳೆಸಿದೆ. ನಿಸ್ವಾರ್ಥ ಸೇವಕರನ್ನು ಸಿದ್ಧಪಡಿಸಿದೆ ಎಂದರು.

ಹಿರಿಯ ಪ್ರಾಧ್ಯಾಪಕ, ಸಿಯುಕೆ ನಿವೃತ್ತ ಕುಲಸಚಿವ ಚಂದ್ರಕಾಂತ ಯಾತನೂರ ಮಾತನಾಡಿ, ನೂರು ವರ್ಷದಿಂದ ಸಂಘ ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದು ಸಮಾಜ ಗಟ್ಟಿಗೊಳಿಸುತ್ತಿದೆ. ರಕ್ಷಾ ಬಂಧನದ ಪವಿತ್ರ ಉತ್ಸವ, ಸಹೋದರತ್ವದ ಬಾಂಧವ್ಯ ಗಟ್ಟಿಗೊಳಿಸಲಿದೆ. ಸಂಘವು ಸಮಾಜದ ಎಲ್ಲ ವರ್ಗಗಳ ಜನರಿಗೆ ಮುಟ್ಟಿರುವುದು ಹರ್ಷದ ವಿಷಯ ಎಂದು ಹೇಳಿದರು.

ವಿಭಾಗದ ಸಹ ಸಂಘಚಾಲಕ ಗಿರೀಶ್ ಹೆಬ್ಬಾರ್, ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ, ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ, ಪ್ರಮುಖರಾದ ಖಗೇಶನ್ ಪಟ್ಟಣಶೆಟ್ಟಿ, ಲಿಂಗರಾಜಪ್ಪ ಅಪ್ಪ, ಅರವಿಂದ ಹುಣಸಗಿ, ಮಹಾದೇವಯ್ಯ ಕರದಳ್ಳಿ, ಸರಸ್ವತಿ ಹೆಬ್ಬಾರ ಇತರರಿದ್ದರು. ಅನಿಲ ತಂಬಾಕೆ ಸ್ವಾಗತಿಸಿದರು. ಮೈತ್ರಿ ಕುಲಕರ್ಣಿ ವೈಯಕ್ತಿಕ ಗೀತೆ ಹಾಡಿದರು.

ಬದುಕುವ ರೀತಿ ಕಲಿಸಿದ ಭಾರತ: ಭಾರತ ತನ್ನ ಆತ್ಮೀಯತೆಯಿಂದ ಜಗತ್ತಿನ ದೊಡ್ಡಣ್ಣ ಆಗಲಿದೆ. ಭಾರತ ಎಲ್ಲೆಲ್ಲಿ ಪ್ರವೇಶಿಸಿದೆ ಅಲ್ಲಿಯ ಜನರಿಗೆ ಆತ್ಮೀಯತೆಯಿಂದ ಬದುಕುವ ರೀತಿ ಕಲಿಸಿದೆ. ಕೋವಿಡ್ ವೇಳೆ ೫೬ ದೇಶಕ್ಕೆ ಉಚಿತ ಲಸಿಕೆ ಪೂರೈಸಿ ಇಡೀ ವಿಶ್ವವೇ ತಿರುಗಿ ನೋಡುವ ರೀತಿ ಕೆಲಸ ಮಾಡಿದೆ. ೧೫ ವರ್ಷದ ಹಿಂದೆ ವಿದೇಶಗಳಿಗೆ ಹೋದಾಗ ಭಾರತಕ್ಕೆ ಕಾಯುವ ಪರಿಸ್ಥಿತಿ ಇತ್ತು. ಆದರೆ ಇದೀಗ ಭಾರತ ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ಪ್ರಾಂತ ಪ್ರಚಾರಕ ನರೇಂದ್ರ ಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net