

ಶಿರಸಿ: ಸರ್ಕಾರವು ಸೋಂದಾ ಮುಂಡಿಗೆ ಕೆರೆಯನ್ನು ಸೂಕ್ಷ್ಮ ಪರಿಸರ ಜೈವಿಕ ತಾಣ ಎಂದು ಘೊಷಿಸಿರುವುದು ಹಲವು ವರ್ಷಗಳಿಂದ ಕೆರೆ ರಕ್ಷಣೆಗೆ ರಚನಾತ್ಮಕ ಆಂದೋಲನ ನಡೆಸುತ್ತಿರುವ ಜಾಗೃತ ವೇದಿಕೆಯ ಕಾರ್ಯಕರ್ತರ ಶ್ರಮಕ್ಕೆ ಸಂದ ಗೌರವವಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಸೋಂದಾ ಗ್ರಾಮ ಪಂಚಾಯಿತಿ ಮುಂಡಿಗೆಕೆರೆಯಲ್ಲಿ ಗುರುವಾರ ಸೂಕ್ಷ್ಮ ಪರಿಸರ-ಜೈವಿಕ ತಾಣ ನಾಮಫಲಕ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ನಾಡಿನ ಅಪರೂಪದ ಜೀವವೈವಿಧ್ಯ ತಾಣ ಎಂದು ಮುಂಡಿಗೆ ಕೆರೆಯನ್ನು ಗುರುತಿಸಿರುವುದು ಉತ್ತಮ ಕಾರ್ಯ. ಇದು ಪರಿಸರ ಉಳಿವಿನಲ್ಲಿ ಮಹತ್ತರ ಹೆಜ್ಜೆಯಾಗಿದೆ ಎಂದರು.
ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ರಾಜ್ಯದ ಎಲ್ಲ ತಾಲೂಕುಗಳಲ್ಲಿ ಕಳೆದ 15 ದಿನಗಳಲ್ಲಿ ಜೀವವೈವಿಧ್ಯ ಜಾಗೃತಿ ಅಭಿಯಾನ ನಡೆಸಲಾಗಿದೆ. ಹಲವು ಕೆರೆ, ನದಿ ಮೂಲ, ಬೆಟ್ಟಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಜೀವವೈವಿಧ್ಯ ದಾಖಲಾತಿ ಕಾರ್ಯಕ್ಕೆ ಬಲ ನೀಡಿದ್ದೇವೆ. ಗ್ರಾಮ ಪಂಚಾಯಿತಿಗಳು ನಿಸರ್ಗ ಸಂಪನ್ಮೂಲ ರಕ್ಷಣೆಗೆ ಮುಂದಾಗಲು ಜಾಗೃತಿ ಮೂಡಿಸಲಾಗಿದೆ ಎಂದರು.
ಜನರ ಸಹಭಾಗಿತ್ವದಲ್ಲಿ ಸೋಂದಾ ಪ್ರದೇಶದ ಕೆರೆಗಳು, ದೇವರ ಕಾಡುಗಳ ಪರಿಸ್ಥಿತಿ ಸಮೀಕ್ಷೆ ಮಾಡಿ ರಕ್ಷಣಾ ಕಾರ್ಯ ಯೋಜನೆ ಸಿದ್ಧಪಡಿಸಲು ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಜಿಪಂ ಸದಸ್ಯ ಜಿ.ಎನ್. ಹೆಗಡೆ, ತಾಪಂ ಸದಸ್ಯ ನರಸಿಂಹ ಹೆಗಡೆ, ಗ್ರಾಪಂ ಅಧ್ಯಕ್ಷ ಮಂಜುನಾಥ ಭಂಡಾರಿ, ಎಸಿಎಫ್ ಡಿ.ರಘು, ಅರಣ್ಯ ಸಿಬ್ಬಂದಿ ಬಸವರಾಜ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಎಫ್.ಜಿ.ಚಿನ್ನಣ್ಣನವರ ಇದ್ದರು. ಜಾಗೃತ ಸಮಿತಿಯ ರತ್ನಾಕರ ಹೆಗಡೆ ಸ್ವಾಗತಿಸಿದರು. ಪಿಡಿಒ ಹರ್ಷ ರಾಥೋಡ ವಂದಿಸಿದರು.