ಜಾಗೃತ ಮತದಾರರಿಂದ ಶಕ್ತಿಯುತ ಸರ್ಕಾರ

bidar vv
ಭಾಲ್ಕಿ ತಾಲೂಕಿನ ಹಾಲಹಳ್ಳಿ ಬಳಿಯ ಬೀದರ್ ವಿಶ್ವವಿದ್ಯಾಲಯದಲ್ಲಿ ಮತದಾರರ ನೋಂದಣಿ ನಿಮಿತ್ತ ಸಸಿ ನೆಡಲಾಯಿತು. ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್, ಡಾ.ಗೌತಮ ಅರಳಿ, ಸುರೇಖಾ, ಡಾ.ರವೀಂದ್ರನಾಥ ಗಬಾಡಿ, ಡಾ.ರಾಮಚಂದ್ರ ಗಣಾಪುರ ಇತರರಿದ್ದರು.
Published on

ಬೀದರ್: ಆಧುನಿಕ ಭಾರತದಂಥ ಪ್ರಜಾಪ್ರಭುತ್ವದಲ್ಲಿ ಮತದಾನ ಮಹತ್ವದ ಪಾತ್ರ ವಹಿಸುತ್ತದೆ. ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದ್ದು, ಜಾಗೃತ ಮತದಾರರಿಂದ ಸದೃಢ, ಶಕ್ತಿಯುತ ಸರ್ಕಾರ ರಚನೆಯಾಗಲು ಸಾಧ್ಯ ಎಂದು ರಾಜ್ಯ ಮಟ್ಟದ ಚುನಾವಣಾ ತರಬೇತುದಾರ ಡಾ.ಗೌತಮ ಅರಳಿ ಹೇಳಿದರು.

ಬೀದರ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಪ್ರಯುಕ್ತ ಭಾಲ್ಕಿ ತಾಲೂಕಿನ ಹಾಲಹಳ್ಳಿ ಬಳಿಯ ವಿವಿಯಲ್ಲಿ ಬುಧವಾರ ಏರ್ಪಡಿಸಿದ್ದ ಮತದಾರರ ನೋಂದಣಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರ ಚೀಟಿ ಹೊಂದಿರದ ಪ್ರತಿಯೊಬ್ಬರಿಗೂ ವೋಟರ್ ಕಾರ್ಡ್ ಪಡೆಯುವ ಬಗ್ಗೆ ತಿಳಿವಳಿಕೆ ಮೂಡಿಸಿದರೆ ಆರೋಗ್ಯಕರ ಮತದಾರರ ಪಟ್ಟಿ ಸಿದ್ಧಗೊಳಿಸಲು ಸಾಧ್ಯ ಎಂದರು.

೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಸಂವಿಧಾನಾತ್ಮಕವಾಗಿ ಪಡೆಯಬೇಕು. ಆದರೆ ಕೆಲವೊಮ್ಮೆ ಮತದಾರರ ಚೀಟಿ ಪಡೆಯುವಲ್ಲಿ ನಿರ್ಲಕ್ಷ್ಯ ಅಥವಾ ಜಾಗೃತಿ ಕೊರತೆಯಿಂದ ವೋಟರ್ ಕಾರ್ಡ್ ಹೊಂದಿರುವುದಿಲ್ಲ. ಹೀಗಾಗಿ ಮತದಾನದ ಹಕ್ಕು ಹೊಂದಲು ಕಡ್ಡಾಯವಾಗಿ ಮತದಾರರ ಚೀಟಿ ಹೊಂದಬೇಕು ಎಂದು ಕರೆ ನೀಡಿದರು.

ವಿವಿ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ್ ಮಾತನಾಡಿ, ಜಾಗೃತ ಮತದಾರರಿಂದ ಉತ್ತಮ ಸರ್ಕಾರ ನಿರ್ಮಿಸಲು, ಸ್ಥಾಪಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನದ ಶಕ್ತಿ, ಸಾಮರ್ಥ್ಯ ಅಪಾರವಾಗಿದೆ. ಆದರೆ ಅನೇಕರು ಯಾವುದೋ ಕಾರಣಕ್ಕೆ ಮತದಾನದಿಂದ ವಂಚಿತರಾಗುತ್ತಾರೆ. ಮತದಾರರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿದಾಗ ದೇಶ ಸಶಕ್ತವಾದ ಆಡಳಿತ ನೀಡಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿವಿ ಆಡಳಿತ ಕುಲಸಚಿವೆ ಸುರೇಖಾ ಮಾತನಾಡಿ, ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ಹೊಂದಿದ ಭಾರತದಲ್ಲಿ ಮತದಾನದ ಮೇಲೆಯೇ ಸರ್ಕಾರದ ಆಗು-ಹೋಗು ನಿರ್ಧಾರವಾಗುತ್ತದೆ. ಹೀಗಾಗಿ ಸುಭದ್ರ ಸರ್ಕಾರ ನೆಲೆಸಲು ಶೇ.೧೦೦ ಅರ್ಹ ಮತದಾರರ ಪಟ್ಟಿ ಸಿದ್ಧಗೊಂಡಾಗಲೇ ಚುನಾಯಿತ ಸರ್ಕಾರ ನಿಖರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಚುನಾವಣೆಯಲ್ಲಿ ಎಲ್ಲ ಅರ್ಹ ನಾಗರಿಕರು ಜವಾಬ್ದಾರಿಯಿಂದ ಮತದಾನ ಮಾಡಬೇಕು. ಬುದ್ಧಿವಂತ ಮತದಾರರಿಂದ ಮಾತ್ರ ಸಮರ್ಥ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು.

ವಿವಿ ವಿಶೇಷಾಧಿಕಾರಿ ಡಾ.ರವೀಂದ್ರನಾಥ ವಿ.ಗಬಾಡಿ ಮಾತನಾಡಿ, ಮತದಾರರಲ್ಲಿ ಅರಿವು ಮೂಡಿಸಲು ಯುವಕರ ಪಡೆ ಸಿದ್ಧಗೊಳ್ಳಬೇಕಾಗಿದೆ. ಅವರು ಪ್ರತಿಯೊಬ್ಬರಿಗೂ ಕಡ್ಡಾಯ ಮತದಾನ ಮಾಡುವಂತೆ ಪ್ರೇರಣೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ವಿವಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಡಾ.ರಾಮಚಂದ್ರ ಗಣಾಪುರ ಪ್ರಾಸ್ತಾವಿಕ ಮಾತನಾಡಿದರು. ಡಾ.ಸಂತೋಷಿಮಾತಾ, ಡಾ.ಅಂಬರೀಶ್ ವೀರನಾಯಕ, ಡಾ.ಶಿವಕುಮಾರ ಹೂಗಾರ ಇತರರಿದ್ದರು. ಗಣೇಶ ಸ್ವಾಗತಿಸಿದರು. ಪಂಚಶೀಲಾ ನಿರೂಪಣೆ ಮಾಡಿದರು.

ಸರ್ಕಾರದ ವಿವಿಧ ಸಹಾಯ ಸೌಲಭ್ಯ ಪಡೆಯಲು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ೧೮ ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬೇಕು. ಮತ ಹಾಕಲು ಯಾವುದೇ ನೆಪ ಹೇಳಬಾರದು. ಮತದಾನಕ್ಕಿಂತ ಮಹತ್ವ ಇನ್ನೊಂದಿಲ್ಲ. ನಾನು ಕಡ್ಡಾಯ ಮತದಾನ ಮಾಡುವೆ ಎಂದು ಪ್ರತಿಜ್ಞೆ ಮಾಡಬೇಕು.

| ಪ್ರೊ.ಬಿ.ಎಸ್.ಬಿರಾದಾರ್

ಬೀದರ್ ವಿಶ್ವವಿದ್ಯಾಲಯ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net