

ಗುಂಡ್ಲುಪೇಟೆ: ತಳಮಟ್ಟದ ಜನರ ಕಣ್ಣೀರು ಒರೆಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಾಗಿ ಜಾಗತಿಕ ಮಟ್ಟದಲ್ಲಿ ಸ್ಮರಣೆಗೆ ಒಳಗಾಗಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ ಅವರ 132 ನೇ ಜನ್ಮದಿನಾಚರಣೆ ಹಾಗೂ ಜೈಭೀಮ್ ಯುವಕರ ಸಂಘ ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲಿ ತಾವು ಎದುರಿಸಿದ ಕಷ್ಟಗಳು ಇತರರಿಗೆ ಬಾರದಂತೆ ಮಾಡಲು ಅಂಬೇಡ್ಕರ್ ಸಂವಿಧಾನ ರಚನೆ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರಕುವಂತೆ ಮಾಡಿದರು. ಇದರಿಂದ ದೇಶದ 140 ಕೋಟಿ ಜನರ ಹಕ್ಕುಗಳ ರಕ್ಷಣೆಯಾಗುತ್ತಿದೆ ಎಂದು ಅಮೇರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಅಸಮಾನತೆ ನಿವಾರಣೆಗೆ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಸಲುವಾಗಿ ತಮ್ಮ ಜೀವಮಾನವನ್ನು ಮೀಸಲಿಟ್ಟಿದ್ದರಿಂದ ವಿಶ್ವಸಂಸ್ಥೆ 100 ದೇಶಗಳ ಜತೆಗೂಡಿ ಅಂಬೇಡ್ಕರ್‌ರ 125 ನೇ ಜನ್ಮದಿನಾಚರಣೆ ಆಚರಿಸಿತು ಎಂದು ಹೇಳಿದರು.
ಶಾಸಕರಾದ ಎಚ್.ಎಂ.ಗಣೇಶ್ ಪ್ರಸಾದ್, ಎ ಆರ್ ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಕಳಲೆ ಕೇಶವಮೂರ್ತಿ, ಮಾಜಿ ಸಂಸದ ಎ.ಸಿದ್ದರಾಜು, ಚಾಮುಲ್ ನಿರ್ದೇಶಕ ಎಚ್.ಎಂ.ನಂಜುಂಡಪ್ರಸಾದ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಸೇರಿದಂತೆ ಹಲವರು ಇದ್ದರು.