ಮೈಸೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸಿ ನವೆಂಬರ್ 2ರಂದು ರೈತರು, ದಲಿತರು, ಕಾರ್ಮಿಕರಿಂದ ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ.
ಸಂಯುಕ್ತ ಹೋರಾಟ- ಕರ್ನಾಟಕದ ಅಡಿಯಲ್ಲಿ ಎಲ್ಲ ಸಂಘಟನೆಗಳು ಅಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಸಮಾವೇಶ ಆಯೋಜಿಸಿ ಉದ್ಯೋಗ ಸೃಷ್ಟಿ ನೆಪದಲ್ಲಿ ರಾಜ್ಯದ ಫಲವತ್ತಾದ ಭೂಮಿ, ವಿದ್ಯುತ್, ನೀರನ್ನು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಸರ್ಕಾರದ ನಿರ್ಧಾರವನ್ನು ಖಂಡಿಸಲಾಗುವುದು ಎಂದು ಸಂಘಟನೆ ಸಂಯೋಜಕರಾದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವೆಂಬರ್ 2ರಿಂದ 4ರ ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಚುನಾವಣೆ ಸಮಯದಲ್ಲಿ ಎಲ್ಲ ಸರ್ಕಾರಗಳು ಇಂತಹ ಸಮಾವೇಶ ಸಂಘಟಿಸಿ, ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗುತ್ತದೆಂದು ಅಬ್ಬರದ ಪ್ರಚಾರ ನಡೆಸಲಾಗುತ್ತದೆ. ಇಂತಹ ಹೂಡಿಕೆದಾರರ ಸಮಾವೇಶಗಳಿಂದ ವಾಸ್ತವವಾಗಿ ರಾಜ್ಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಅನುಕೂಲವಾಗುವ ಬದಲು ಕಾರ್ಪೊರೇಟ್ ಕಂಪನಿಗಳು, ಏಜೆಂಟರಿಗೆ ಲಾಭವಾಗುತ್ತದೆ. ಅಲ್ಲದೆ, ಒಂದು ಕಡೆ ರೈತರು ತಮ್ಮ ಭೂಮಿ ಕಳೆದುಕೊಳ್ಳುತ್ತಿದ್ದು, ಕಾರ್ಮಿಕರ ಶೋಷಣೆ ಇನ್ನಷ್ಟು ಹೆಚ್ಚುತ್ತದೆ ಎಂದು ದೂರಿದರು.
ಈಗಾಗಲೇ ಕೃಷಿ ಭೂಮಿ ಕಡಿಮೆಯಾಗಿ ಆಹಾರ ಉತ್ಪಾದನೆ ಕಡಿಮೆ ಅಗುತ್ತಿದೆ. ಈಗ ಇಂತಹ ಹೂಡಿಕೆದಾರರ ಸಮಾವೇಶದ ಮೂಲಕ ಬಲಾತ್ಕಾರವಾಗಿ ಭೂಮಿ ಕಸಿದುಕೊಳ್ಳಲಾಗುತ್ತಿದೆ. ಆದ್ದರಿಂದ ಕಂಪನಿಗಳಿಗೆ ಲಾಭ ಮಾಡಿಕೊಡಲು ಸರ್ಕಾರ, ರೈತರ ಭೂಮಿ ನಾಶ ಮಾಡಬಾರದು ಎಂದು ಆಗ್ರಹಿಸಿದರು.
ರೈತರು, ದಲಿತರ ಸ್ವಾಧೀನದಲ್ಲಿರುವ ಕೃಷಿ ಭೂಮಿ ಸಕ್ರಮಗೊಳಿಸಬೇಕು, ಅತಿವೃಷ್ಟಿಯಿಂದ ನಷ್ಟಕ್ಕೆ ಗುರಿಯಾದವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು, ವಿದ್ಯುತ್ ಕ್ಷೇತ್ರದ ಖಾಸಗೀಕರಣ ನಿಲ್ಲಬೇಕು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವ ರೀತಿ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಬಾರದು ಎನ್ನುವ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗುವುದು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸಂಚಾಲಕ ಪಿ. ಮರಂಕಯ್ಯ ಇದ್ದರು.