ಜಾಗ ವಶಪಡಿಸಿಕೊಳ್ಳಲು ವಿಳಂಬ!

02 05 2025 KLR_PAGE_03
Published on

ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೋಲಾರ ನಗರಸಭೆಗೆ ಕ್ರಯ ಆಗಿರುವ ಜಮೀನುಗಳ ಸಂಬಂಧ ದಾಖಲೆಗಳು ಪತ್ತೆಯಾಗಿವೆ. ಆದರೆ ಜಮೀನುಗಳನ್ನು ಸ್ವಾಧಿನ ಪಡಿಸಿಕೊಳ್ಳಲು ಅಧಿಕಾರಿಗಳು, ಆಡಳಿತ ಮಂಡಳಿಯವರು ಮುಂದಾಗದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ತಾಲೂಕಿನ ಖಾದ್ರಿಪುರ ಗ್ರಾಮದ ಸರ್ವೇ ನಂ.29 ಪೈಕಿ ಜಮೀನು ಖಾಸಗಿ ವ್ಯಕ್ತಿಗಳ ಸ್ವತ್ತಾಗಿದೆ. ಈ ಸ್ವತ್ತಿನ ಸಂಬಂಧದ ದಾಖಲೆಗಳನ್ನು ನಗರಸಭೆ ಸದಸ್ಯ ಪ್ರವಿಣ್​ಗೌಡ ಅವರು, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

2002ರಲ್ಲಿ ಕ್ರಯ ಆಗಿರುವ ಜಮೀನನ್ನು ನಗರಸಭೆಯ ಆಗಿನ ಪೌರಾಯುಕ್ತರು ಹಾಗೂ ಚುನಾಯಿತ ಆಡಳಿತ ಮಂಡಳಿಯವರು ವ್ಯಾಪ್ತಿಗೆ ಪಡೆದು ಬೇಲಿ ನಿರ್ಮಿಸಿಕೊಂಡು ಇದು ನಗರಸಭೆಗೆ ಸೇರಿರುವ ಸ್ವತ್ತು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಲಕ ಹಾಕಿದ್ದರೆ, ಆ ಜಮೀನು ಭೂಗಳ್ಳರ ಪಾಲಾಗುತ್ತಿರಲಿಲ್ಲ. ಸದಸ್ಯರು ದಾಖಲೆಗಳನ್ನು ಹೊರ ತರುತ್ತಿದ್ದಂತೆ ನಗರಸಭೆಯ ಕೆಲ ಅಧಿಕಾರಿ ಮತ್ತು ಸಿಬ್ಬಂದಿಯ ನಿದ್ದೆ ಗೆಡಿಸಿದೆ. ಈ ವಿಚಾರವು ಬೆಳಕಿಗೆ ಬಂದು ಒಂದು ವಾರ ಕಳೆದಿದ್ದು, ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆ ಸೃಷ್ಟಿಸಿರುವವರ ವಿರುದ್ಧ ದೂರು ನೀಡಲಾಗಿದೆಯೇ ಹೊರತು ಇದುವರೆಗೂ ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳುವ ಕೆಲಸ ಆಗಿಲ್ಲ.

ಜತೆಗೆ ಪೌರಾಯುಕ್ತರು, ಅಧ್ಯಕ್ಷರು, ಇತರ ಸದಸ್ಯರು ನಗರಸಭೆಗೆ ಸೇರಿರುವ ಜಾಗದ ಸ್ಥಳಕ್ಕೆ ಭೇಟಿ ನೀಡಲು ಎರಡ್ಮೂರು ಬಾರಿ ಪ್ರಯತ್ನಿಸಿದರೂ, ಅದು ವಿಲವಾಯಿತು. ಇದು ಕೆಲ ನಗರಸಭೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ನಗರಸಭೆಗೆ ಸೇರಿರುವ ಜಮೀನನ್ನು ಸ್ವಾಧಿನಪಡಿಸಿಕೊಳ್ಳಲು ಕಾಳಜಿ ತೋರುತ್ತಿಲ್ಲ ಎಂದು ದೂರಿದ್ದಾರೆ. ಒಂದು ವಿಚಾರವು ಬೆಳಕಿಗೆ ಬರುತ್ತಿದ್ದಂತೆ, ನಗರಕ್ಕೆ ಸಮೀಪದಲ್ಲಿರುವ ಗ್ರಾಮಗಳ ಬಳಿ ನಗರಸಭೆ ಹೆಸರಿಗೆ ಕ್ರಯ ಆಗಿಯೂ ಬೇರೆಯವರು ಸ್ವಾಧಿನದಲ್ಲಿರುವುದು ಮತ್ತಷ್ಟು ಬಯಲಿಗೆ ಬಂದಿವೆ. ಇವುಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ಲಭ್ಯವಿದ್ದು, ಇದು ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ, ಕೆಲ ಸದಸ್ಯರಿಗೆ ತಲೆ ನೋವಾಗಿ ಪರಿಣಮಿಸಿದೆ.

ಹಳೇ ಸಿಬ್ಬಂದಿಯೇ ಕಾರಣ? : ಈಗಾಗಲೇ ಬೆಳಕಿಗೆ ಬಂದಿರುವ ನಗರಸಭೆಯ ಜಮೀನು ಸಂಬಂಧದ ದಾಖಲೆಗಳನ್ನು ನಗರಸಭೆಯ ಕೆಲ ಸಿಬ್ಬಂದಿಯೇ ತಿದ್ದುಪಡಿ ಮಾಡಿದ್ದಾರೆ. ಜತೆಗೆ ಖಾಸಗಿ ವ್ಯಕ್ತಿಯೊಂದಿಗೆ ಶಾಮೀಲಾಗಿ ಅನುಕೂಲಕರವಾಗಿ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ನಕಲಿ ಪತ್ರಗಳನ್ನು ಸೃಷ್ಟಿಸಿ ವ್ಯವಹಾರ ಮಾಡಿದ್ದಾರೆ. ನಗರಸಭೆಯಲ್ಲಿ ಬಹಳ ವರ್ಷಗಳಿಂದ ತಳ ಊರಿರುವ ಸಿಬ್ಬಂದಿಯೇ ಕಾರಣವಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಜಮೀನುಗಳ ಸಂಬಂಧ ಒಂದು ಕಾಲದಲ್ಲಿ ನಗರಸಭೆಯಲ್ಲಿ ದಾಖಲೆಗಳು ಈಗ ಇಲ್ಲದೇ ಇರಲು ಕಾರಣ ಯಾರು.? ಸುಮಾರು 7&10 ವರ್ಷಗಳಿಗೂ ಅಧಿಕ ಕಾಲದಿಂದ ಇಲ್ಲೆ ಕೆಲಸ ಮಾಡುತ್ತಿರುವವರು ಇದ್ದಾರೆ. ಠಿಕಾಣಿ ಹೂಡಿರುವ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿದರೆ ಸ್ವಲ್ಪಮಟ್ಟಿಗೆ ವ್ಯವಸ್ಥೆಯೂ ಹತೋಟಿಗೆ ಬರಲು ಸಾಧ್ಯ.

ನಗರಸಭೆಗೆ ಜಮೀನುಗಳು ಎಲ್ಲೇಲ್ಲಿವೆ? : ಕೋಲಾರ ತಾಲೂಕಿನ ಕಸಬಾ ಹೋಬಳಿ ಸುಲ್ತಾನ ತಿಪ್ಪಸಂದ್ರ, ಸಂಗೋಡಹಳ್ಳಿ, ಖಾದ್ರಿಪುರ, ಬಾರಂಡಹಳ್ಳಿ, ಚಿಕ್ಕಹಾಸಳ, ದೊಡ್ಡ ಹಾಸಳ ಗ್ರಾಮಳ ಸಮೀಪದಲ್ಲಿ ಒಟ್ಟು 55 ಎಕರೆ 49 ಗುಂಟೆ ಜಮೀನು ನಗರ ಸಭೆಗೆ ಸೇರಿದೆ ಎಂಬುದು ಬಯಲಾಗಿದೆ. ಬಹುತೇಕ ಸರ್ವೇ ನಂಬರ್​ಗಳ ಪಹಣಿಗಳಲ್ಲಿ ಪೌರಾಯುಕ್ತರು, ನಗರಸಭೆ ಎಂದು ಬರುತ್ತಿದೆ. ಕೆಲ ಜಮೀನುಗಳನ್ನು ಬಡಾವಣೆಗಳಾಗಿ ವಿಂಗಡಿಸಿ ನಿವೇಶನ, ವಸತಿ ರಹಿತರಿಗೆ ಹಂಚಿಕೆ ಮಾಡಲಾಗಿದೆ. ಡಿಸಿ, ಎಸಿ, ತಾಲೂಕು ಕಚೇರಿಗಳಲ್ಲಿ ದಾವೆ ಹೂಡಿರುವ ಕುರಿತು ನಮೂದು ಮಾಡಲಾಗಿದೆ. ನ್ಯಾಯಾಲಯಗಳಲ್ಲಿ ದಾವೆ ಇರುವ ಜಮೀನುಗಳ ಸಂಬಂಧ ನಗರಸಭೆಯ ಸಿಬ್ಬಂದಿ ಸಮರ್ಪಕ ದಾಖಲೆ ಸಲ್ಲಿಸುವಲ್ಲಿ ವಿಲರಾಗಿದ್ದಾರೆ. ಆದ್ದರಿಂದ ಕೆಲ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಪರಭಾರೆ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದಾರೆ. ಇಲಾಖೆಯ ಪರ ವಾದ ಮಂಡನೆ ಮಾಡಲು ವಕೀಲರನ್ನು ನೇಮಕ ಮಾಡಿಕೊಂಡಿದ್ದು, ಅವರಿಗೆ ಪ್ರತಿ ತಿಂಗಳು ಶುಲ್ಕ ಮಾತ್ರ ಪಾವತಿ ಮಾಡಲಾಗುತ್ತಿದೆ. ಆದರೆ ಆಸ್ತಿಗಳನ್ನು ನಗರಸಭೆಗೆ ಉಳಿಸುವ ಪ್ರಯತ್ನ ಮಾಡಿಲ್ಲ ಎಂದು ಕೆಲ ಸದಸ್ಯರು ದೂರಿದ್ದಾರೆ.

ಈಗಾಗಲೇ ಖಾದ್ರಿಪುರ ಗ್ರಾಮ ಸಮೀಪದ ಸರ್ವೇ ನಂ.29ರ ಜಮೀನು ಸಂಬಂಧದ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಆ ಜಾಗವನ್ನು ವಶಕ್ಕೆ ಪಡೆಯಲು ಅಧ್ಯಕ್ಷರು, ಅಧಿಕಾರಿಗಳು ಆಶ್ವಾಸನೆ ನೀಡಿದರೇ ಹೊರತು ಇದುವರೆಗೂ ಕ್ರಮಕೈಗೊಂಡಿಲ್ಲ. ಇದರಿಂದಾಗಿ ನಗರಭೆಯ ಎದುರು ಶುಕ್ರವಾರ ಒಂಟಿಯಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇನೆ. | ಪ್ರವಿಣ್​ ಗೌಡ ನಗರಸಭೆ ಸದಸ್ಯ ಹಾಗೂ ದೂರುದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net