

ಅಥಣಿ ಗ್ರಾಮೀಣ: ಯಲ್ಲಮ್ಮವಾಡಿ ಕೆರೆಯಲ್ಲಿ ನಿರ್ಮಿಸಲಾಗಿರುವ ಅಥಣಿ ತಾಲೂಕಿನ ಪೂರ್ವ ಭಾಗದ ೧೪ ಕೆರೆ ತುಂಬಿಸುವ ಜಾಕ್‌ವೆಲ್ ಕಾಮಗಾರಿ ಪೂರ್ಣಗೊಂಡಿದ್ದು, ಆದಷ್ಟು ಬೇಗ ಪಂಪ್‌ಸೆಟ್ ಕೂಡಿಸಿ ಬಾಡಗಿ ಕೆರೆಗೆ ನೀರು ಹರಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಯಲ್ಲಮ್ಮವಾಡಿ ಕೆರೆಯಲ್ಲಿರುವ ತಾಲೂಕಿನ ಪೂರ್ವ ಭಾಗದ ೧೪ ಕೆರೆ ತುಂಬಿಸುವ ಜಾಕ್‌ವೆಲ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಝುಂಜರವಾಡ ಗ್ರಾಮದ ಕೃಷ್ಣಾನದಿ ನೀರನ್ನು ಯಲ್ಲಮ್ಮವಾಡಿ ಕೆರೆಯಲ್ಲಿ ಈಗ ಸಂಗ್ರಹಿಸಲಾಗುತ್ತಿದೆ. ಇಲ್ಲಿಂದ ಬಾಡಗಿ ಕೆರೆವರೆಗೆ ಪೈಪ್‌ಲೈನ್ ಕಾಮಗಾರಿ ಕೂಡ ಪೂರ್ಣಗೊಂಡಿದ್ದು, ಪಂಪಸೆಟ್ ಕೂಡಿಸಿದ ಬಳಿಕ ಬಾಡಗಿ ಗ್ರಾಮದ ಕೆರೆ ನೀರು ತುಂಬಿಸಲಾಗುವುದು. ಇನ್ನೂ ಕರಿಮಸೂತಿ ಏತನೀರಾವರಿ ಕಾಲುವೆಯಿಂದ ವಂಚಿತವಾದ ಐಗಳಿ, ಅರಟಾಳ, ಕೋಹಳ್ಳಿ, ಪಡತರವಾಡಿ, ಅಡಹಳ್ಳಿ, ಹುಚ್ಚನಕೋಡಿ ಕೆರೆ, ಅಡಹಳ್ಳಟ್ಟಿ ದೊಡ್ಡಕರೆ ತುಂಬಿಸಲು ಪೈಪ್‌ಲೈನ್ ಜೋಡಣೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ತಾಲೂಕಿನ ಪೂರ್ವ ಭಾಗದ ೧೪ ಕೆರೆಗಳನ್ನು ತುಂಬಿಸಿ ಈ ಭಾಗದ ಬರಡು ಭೂಮಿಗೆ ನೀರುಣಿಸಲಾಗುವುದು ಎಂದರು.
ಜೂ. ೧ರಂದು ಬೆಳಗ್ಗೆ ೯ಗಂಟೆಗೆ ಕೃಷ್ಣಾನದಿ ಪಕ್ಕದಲ್ಲಿರುವ ಹಲ್ಯಾಳ ಜಾಕ್‌ವೆಲ್‌ನಿಂದ ನೀರು ಹರಿಸಿ ಕರಿಮಸೂತಿ ಹಾಗೂ ತುಂಗಳ-ಸಾವಳಗಿ ಏತನೀರಾವರಿ ಕಾಲುವೆಗೂ ಕೂಡ ನೀರು ಬಿಡಲಾಗುವುದು. ಮೇಲ್ಭಾಗದ ಗ್ರಾಮದ ರೈತರು ಕಾಲುವೆಗೆ ಪಂಪ್‌ಸೆಟ್ ಕೂಡಿಸದೇ ಮೊದಲು ಕೆಳಬಾಗದ ಗ್ರಾಮದ ರೈತರ ಜಮೀನುಗಳಿಗೆ ತಲುಪಲು ಸಹಕಾರ ನೀಡಬೇಕು ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಶಾಮರಾವ್ ಪೂಜಾರಿ, ಅನಿಲ ಮುಳಿಕ, ರಮೇಶ ಗಾಣಗೇರ, ಜಡೆಪ್ಪ ಕುಂಬಾರ, ಅಮರ ದುರ್ಗಣ್ಣವರ, ಗಣಪತಿ ಚವ್ಹಾಣ, ಅಪ್ಪಾಸಾಹೇಬ ನಾಯಿಕ, ಪ್ರವೀಣ ಪಾಟೀಲ ಇತರರಿದ್ದರು.