ಜಾ.ದಳದಿಂದ ಸಮರ್ಥ ಸರ್ಕಾರ

18tnpphoto01
ತಿ.ನರಸೀಪುರ ಕ್ಷೇತ್ರ ವ್ಯಾಪ್ತಿಯ ನುಗ್ಗೇನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಶಾಸಕ ಎಂ.ಅಶ್ವಿನ್ ಕುಮಾರ್ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದರು. ಮುಖಂಡರಾದ ಸೋಮರಾಜ್, ಬಸವನಹಳ್ಳಿ ರಾಜು, ವೆಂಕಟೇಶ್, ಜೈಪಾಲ್ ಭರಣಿ, ಚಿನ್ನಸ್ವಾಮಿ, ಕುಮಾರಸ್ವಾಮಿ, ರಾಮಸ್ವಾಮಿ ಇತರರು ಇದ್ದರು.
Published on

ತಿ.ನರಸೀಪುರ: ಜಾ.ದಳದಿಂದ ಸಮರ್ಥ ಸರ್ಕಾರ ರಚನೆಯಾಗಲು ಸಹಕರಿಸಿ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಮನವಿ ಮಾಡಿದರು.

ಕ್ಷೇತ್ರ ವ್ಯಾಪ್ತಿಯ ಜೀನುಗುಡ್ಡೆ ಹನುಮಂತರಾಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮನೆ ಮನೆ ಮತ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದಿನ ಎಲ್ಲ ಚುನಾವಣೆ ಸಂದರ್ಭದಲ್ಲೂ ಜೀನುಗುಡ್ಡೆ ಹನುಮಂತರಾಯನಿಗೆ ಪೂಜೆ ಸಲ್ಲಿಸಿಯೇ ಮತ ಕೇಳುವ ಪ್ರಕ್ರಿಯೆ ಆರಂಭಿಸಿದ್ದೆ. ಹಾಗಾಗಿ ನುಗ್ಗೇನಹಳ್ಳಿ ಕೊಪ್ಪಲಿನ ಗ್ರಾಮಸ್ಥರೊಂದಿಗೆ ನನ್ನ ವಿಶೇಷ ಬಾಂಧವ್ಯ ಇದೆ ಎಂದರು.

ಶಾಸಕನಾಗಿ ಆಯ್ಕೆಯಾದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ. ನಮ್ಮ ಸರ್ಕಾರ ಅಧಿಕಾರದಲ್ಲಿ ಇಲ್ಲದಿದ್ದರೂ ಹೋರಾಟ ಮಾಡಿ ಕ್ಷೇತ್ರಕ್ಕೆ ಅನುದಾನ ತಂದಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗಲಿಲ್ಲ ಎಂಬ ಕೊರಗು ನನಗೂ ಇದೆ. ಶಾಸಕತ್ವದ ಅವಧಿಯಲ್ಲಿ ಎರಡು ವರ್ಷ ಕೋವಿಡ್, ಮತ್ತೊಂದು ವರ್ಷ ಪ್ರವಾಹ ಮತ್ತಿತರ ಸಂಕಷ್ಟಗಳ ನಡುವೆಯೂ ಸಾಕಷ್ಟು ಅನುದಾನ ತಂದು ಅಗತ್ಯವಿರುವ ಕಡೆ ಅಭಿವೃದ್ಧಿ ಕೆಲಸ ಮಾಡಿರುವೆ. ಹಾಗಾಗಿ ಇನ್ನೊಂದು ಅವಧಿಗೆ ಮತದಾರರು ಆಶೀರ್ವದಿಸಿದರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತೇನೆ. ಕಳೆದ ಬಾರಿ ನಿರೀಕ್ಷೆಗೂ ಮೀರಿ ನೀಡಿದ್ದ ಬೆಂಬಲವನ್ನು ಈ ಬಾರಿ ನೀಡುವ ಮೂಲಕ ಮತ್ತೊಮ್ಮೆ ಗೆಲ್ಲಿಸಿಕೊಡಿ ಎಂದು ಅವರು ಮನವಿ ಮಾಡಿದರು.

ಈ ಬಾರಿ ಚುನಾವಣೆಯಲ್ಲಿ ಬಹುಮತ ಗಳಿಸುವ ದಿಕ್ಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಿಷನ್ 123 ಯೋಜನೆ ಸಾಕಾರಗೊಳ್ಳಬೇಕಿದೆ. ಪಂಚರತ್ನ ಯೋಜನೆಯೇ ರಾಜ್ಯಕ್ಕೆ ದಾರಿದೀಪವಾಗಿದೆ.

ಅಂಗವಿಕಲರ, ವಿಧವೆಯರ ಮತ್ತು ವೃದ್ಧರ ಮಾಸಾಶನ 5 ಸಾವಿರ ರೂ.ಗಳಿಗೆ ಹೆಚ್ಚಿಸುವ ಮಹದಾಸೆ ನಮ್ಮ ಪಕ್ಷಕ್ಕೆ ಇದೆ. ಇದಕ್ಕೆ ಪೂರಕ ಶಕ್ತಿ ಕಲ್ಪಿಸಿಕೊಡಲು ಮತದಾರರು ಮುಂದಾಗಬೇಕೆಂದು ಅಶ್ವಿನ್ ಕುಮಾರ್ ಕೋರಿದರು.

ಜಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹೋಟೆಲ್ ರಾಮಸ್ವಾಮಿ ಮಾತನಾಡಿ, ಶಾಸಕ ಅಶ್ವಿನ್ ಕುಮಾರ್ ಅವರ ಸರಳತೆ, ಸಜ್ಜನಿಕೆಗಳೇ ಗೆಲುವಿಗೆ ಶ್ರೀರಕ್ಷೆ ಎಂದರು. ಅಶ್ವಿನ್ ಕುಮಾರ್ ಸಾಗರೋಪಾದಿಯಲ್ಲಿ ಅನುದಾನ ತರುವವರಿದ್ದಾರೆ ಎಂದರು.

ಇದೇ ವೇಳೆ ತಾ.ಪಂ.ಮಾಜಿ ಸದಸ್ಯ ಶ್ರೀನಿವಾಸ್, ಎಪಿಎಂಸಿ ಮಾಜಿ ಸದಸ್ಯ ರಾಜೇಶ್, ಕಾಂಗ್ರೆಸ್ ಮುಖಂಡ ಎಚ್. ಎನ್. ರವಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡರು.

ಮನೆ ಮನೆ ಪ್ರಚಾರದಲ್ಲಿ ಮುಖಂಡರಾದ ಸೋಮರಾಜ್, ಬಸವನಹಳ್ಳಿ ರಾಜು, ವೆಂಕಟೇಶ್, ಜೈಪಾಲ್ ಭರಣಿ, ಚಿನ್ನಸ್ವಾಮಿ, ಅತ್ತಹಳ್ಳಿ ಕುಮಾರಸ್ವಾಮಿ, ಕುರುಬೂರು ಗಜಪತಿ, ಸಾಲೂರು ಸ್ವಾಮಿ, ಕುಮಾರ್, ಗೊರವನಹಳ್ಳಿ ನಾಗರಾಜು, ಮೇಗಳಕೊಪ್ಪಲು ಜಯರಾಂ, ಬಾನಗೋಡಿ ನಾರಾಯಣಸ್ವಾಮಿ, ದೇವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net