ಜವೇನಹಳ್ಳಿ ಮಠದ ಕಟ್ಟಡದ ಮೇಲೆ ಬಿದ್ದ ಮರ

ಜವೇನಹಳ್ಳಿ ಮಠದ ಕಟ್ಟಡದ ಮೇಲೆ ಬಿದ್ದ ಮರ
Published on

ಹಾಸನ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಮಣ್ಣಿನ ತೇವಾಂಶ ಹೆಚ್ಚಾಗಿ ಹಳೆಯ ಕಾಲದ ಬನ್ನಿಮರವೊಂದು ಇತಿಹಾಸ ಪ್ರಸಿದ್ಧ ಶ್ರೀ ಜವೇನಹಳ್ಳಿ ಮಠದ ಕಟ್ಟಡದ ಮೇಲೆ ಮಂಗಳವಾರ ರಾತ್ರಿ ಬಿದ್ದು, ಕಟ್ಟಡ ಬಹುತೇಕ ಭಾಗ ಹಾನಿಗೊಳಗಾಗಿದೆ.
ನಗರದ ಶ್ರೀ ಸಂಗಮೇಶ್ವರ ಬಡಾವಣೆಯಲ್ಲಿರುವ ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಜವೇನಹಳ್ಳಿ ಮಠದ ಕಟ್ಟಡದ ಮೇಲೆ 300 ವರ್ಷಗಳ ಹಳೆಯ ಬೃಹತ್ ಗಾತ್ರದ ಬನ್ನಿ ಮರವೊಂದು ಉರುಳಿದೆ. ಹಳೆಯ ಕಲ್ಲಿನ ಕಟ್ಟಡವಾದರೂ ಬಹುತೇಕ ಭಾಗ ಹಾನಿಯಾಗಿ, ಗರ್ಭಗುಡಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಳೆಯ ಕಟ್ಟಡವಾಗಿದ್ದು, ಶಿಥಿಲವಾಸ್ಥೆಗೊಂಡಿದ್ದರಿಂದ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿಯವರು ಬೇರೊಂದು ಕಟ್ಟಡದಲ್ಲಿ ವಾಸ್ತವ್ಯ ಹೂಡಿದ್ದರಿಂದ ಅನಾಹುತದಿಂದ ಪಾರಾಗಿದ್ದಾರೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭೂಮಿ ತೇವಾಂಶ ಹೆಚ್ಚಾಗಿ ಈಗಾಗಲೇ ಅನೇಕ ಮರಗಳು ಧರೆಗುರುಳುತ್ತಿವೆ. ಮರ ಬೀಳುವ ವೇಳೆ ಏನಾದರೂ ಮಠದ ಒಳಗೆ ಭಕ್ತರು ಇದ್ದರೇ ಬಾರಿ ಅನಾಹುತವೇ ಆಗುತಿತ್ತು. ಆದರೆ ಮರ ಬಿದ್ದ ವೇಳೆ ಭಕ್ತರು ಗರ್ಭ ಗುಡಿಯ ದೂರದಲ್ಲಿ ಇದ್ದುದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಶ್ರೀ ಜವೇನಹಳ್ಳಿ ಹಿತಾರಕ್ಷಣಾ ಸಮಿತಿ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿರುವ ಸುಮಾರು 700 ವರ್ಷಗಳ ಇತಿಹಾಸವಿರುವಂತಹ ಶ್ರೀ ಜವೇನಹಳ್ಳಿ ಮಠ ಇಂದು ದುಸ್ಥಿತಿಯಲ್ಲಿದೆ. ಹೆಚ್ಚಿನ ಮಳೆಯಿಂದ ಮಠದ ಬಳಿ ಇದ್ದಂತಹ ಮುನ್ನೂರು ವರ್ಷಗಳ ಹಳೆಯದಾದ ಬನ್ನಿಮರ ಮಠದ ಮೇಲೆ ಬಿದ್ದು ಹೆಚ್ಚು ಹಾನಿಯಾಗಿದೆ. ಈ ಮಠದ ಕಟ್ಟಡ ಪುನರ್ ನಿರ್ಮಾಣ ಮಾಡಬೇಕಾಗಿರುವುದರಿಂದ ಎಲ್ಲ ಭಕ್ತರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು.
ಬೃಹತ್ ಮರ ಮಠದ ಮೇಲೆ ಬಿದ್ದಿರುವುದರಿಂದ ಮಠದ ಹಳೆಯ ಕಾಲದ ಕಲ್ಲುಗಳೆಲ್ಲಾ ಜರುಗಿದ್ದು, ಮಠದ ಒಳಗೆ ಮಳೆ ನೀರು ಹರಿಯುತ್ತಿದೆ. ಇದನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ದುರಂತದಿಂದ ದೇವಸ್ಥಾನದ ಒಳಗೆ ಹೋಗಲು ಸ್ಥಳವಾಕಾಶ ಇಲ್ಲದೇ ಅರ್ಚಕರು ಹೊರಗಡೆಯೇ ಪೂಜೆ ಮಾಡಿದ್ದಾರೆ. ಶೀಘ್ರವೇ ಜಿಲ್ಲಾಡಳಿತ ಗಮನವಹಿಸಿ ದುರಸ್ತಿ ಮಾಡಿಸಲು ಮುಂದಾಗುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net