ಜವಾಬ್ದಾರಿಯಿಂದ ವಾಹನ ಚಲಾಯಿಸಿ

18HDK1
Published on

ಎಚ್.ಡಿ.ಕೋಟೆ: ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕಡೆದುಕೊಂಡು ಹೋಗುವಾಗ ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್ ಸಲಹೆ ನೀಡಿದರು.


ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ಯಾಸೆಂಜರ್ ಆಟೋ, ವಾಹನ ಚಾಲಕರು ಹಾಗೂ ಮಾಲೀಕರ ಸಭೆಯಲ್ಲಿ ಮಾತನಾಡಿ, ಶಾಲಾ ವಾಹನಗಳಲ್ಲಿ ಅಗತ್ಯಗಿಂತ ಹೆಚ್ಚು ಮಕ್ಕಳನ್ನು ಚಾಲಕರು ಆಟೋಗಳಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾರೆ ಎಂಬ ದೂರುಗಳು ಇದೆ. ಅದೇ ರೀತಿ ವಾಹನ ಪರವಾನಗಿ ಹೊಂದಿಲ್ಲದೆ ವಾಹನ ಚಾಲನೆ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಇದು ಸರಿಯಲ್ಲ. ಚಾಲಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಏನಾದರೂ ಅವಘಡ ಸಂಭವಿಸಿದರೇ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರಿಗೆ 15 ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.


ಆಟೋ ಚಾಲಕರು ವಾಹನ ಚಾಲನಾ ಪರವಾನಗಿ ಇಟ್ಟುಕೊಂಡು, ಸಮವಸ್ತ್ರ ಹಾಕಿಕೊಂಡು ಆಟೋ ಚಾಲನೆ ಮಾಡಬೇಕು. ಚಾಲಕರು ಸಮವಸ್ತ್ರ ಧರಿಸದೆ ಆಟೋ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಇನ್ನು ಮುಂದೆ ಎಲ್ಲರೂ ಡಿಎಲ್ ಇಟ್ಟುಕೊಂಡು ಮತ್ತು ಖಾಕಿ ಸಮವಸ್ತ್ರ ಧರಿಸಿಕೊಂಡು ವಾಹನ ಚಾಲನೆ ಮಾಡಬೇಕು. ರೋಗಿಗಳ ಬಳಿ ಆಟೋ ಚಾಲಕರು ಹೆಚ್ಚುವರಿ ಹಣ ವಸೂಲಿ ಮಾಡಬಾರದು ಎಂದು ತಿಳಿಸಿದರು.


ಚಾಲನಾ ಪರವಾನಗಿ ಇಲ್ಲದವರ ಆಟೋ ಚಾಲಕರ ಹೆಸರು ಪಟ್ಟಿ ಮಾಡಿ ನೀಡಿದರೆ, ಆರ್‌ಟಿಒ ಅಧಿಕಾರಿಗಳ ಗಮನಕ್ಕೆ ತಂದು ಡಿ.ಎಲ್ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ಇನ್ಸ್‌ಪೆಕ್ಟರ್ ಶಬ್ಬೀರ್ ಹುಸೇನ್, ಪ್ರತಿಯೊಂದು ಆಟೋಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಸ್ಟಿಕರ್ ಹಾಗೂ ಡಿಸ್‌ಪ್ಲೇ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಸ್‌ಐ ರಸುಲ್ ಪಾಗವಾಲೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಚಲುವರಾಜು, ಗೋಪಾಲ, ಗುರುಸ್ವಾಮಿ, ಸಿದ್ದರಾಜು, ಗುರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net