ಜವಾಬ್ದಾರಿ ಅರಿತು ಕೆಲಸ ಮಾಡಿ

20RAM-2-Web
ರಾಮದುರ್ಗ ತಾಪಂ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕರೊನಾ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ಡಿಎಸ್‌ಪಿ ರಾಮನಗೌಡ ಹಟ್ಟಿ ಇದ್ದರು.
Published on

ರಾಮದುರ್ಗ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕರೊನಾ ಮಹಾಮಾರಿ ತೊಲಗಿಸಲು ವೈದ್ಯರ ಜತೆಗೆ ಅಧಿಕಾರಿಗಳು ಕೆಲಸ ನಿರ್ವಹಿಸುವ ಪ್ರತಿಜ್ಞೆ ಮಾಡಬೇಕು. ನೋಡಲ್ ಅಧಿಕಾರಿಗಳು ತಾವು ನೇಮಕವಾದ ಗ್ರಾಪಂ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.

ಪಟ್ಟಣದ ತಾಪಂ ಸಭಾಭವನದಲ್ಲಿ ಕರೊನಾ ನಿರ್ವಹಣೆ ಕುರಿತು ಗುರುವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೆಲ ಗ್ರಾಮಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಆರೋಗ್ಯ ಇಲಾಖೆ, ನೋಡಲ್ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಸಾರ್ವಜನಿಕರಿಂದ ದೂರು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸೋಂಕು ತಡೆಗೆ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹೋಮ್ ಐಸೋಲೇಷನ್‌ನಿಂದ ಇಡೀ ಕುಟುಂಬಕ್ಕೆ
ಸೋಂಕು ವ್ಯಾಪಿಸುತ್ತಿದೆ. ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸೋಂಕಿತರು ಪತ್ತೆಯಾಗುವ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಇತರ ಕುಟುಂಬ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಬೇಕು ಎಂದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಅನುಭವ ಇಲ್ಲದ ಕೆಲವರು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ತಾಪಂ ಇಒ ಮುರುಳೀಧರ ದೇಶಪಾಂಡೆ, ಡಿಎಸ್‌ಪಿ ರಾಮನಗೌಡ ಹಟ್ಟಿ, ಸಿಪಿಐ ಶಶಿಕಾಂತ ವರ್ಮಾ ಮತ್ತಿತರರು ಇದ್ದರು.

ಕರೊನಾ ಸೇನಾನಿ ಎಂದು ಪರಿಗಣಿಸಲು ಒತ್ತಾಯ

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸೋಂಕಿತರ ಆರೋಗ್ಯದ ಮೇಲ್ವಿಚಾರಣೆ ನಡೆಸಿ, ಔಷಧೋಪಚಾರ ಮಾಡಲು ಕ್ರಮಕೈಗೊಳ್ಳಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮನ್ನು ಸರ್ಕಾರ ಫ್ರಂಟ್‌ಲೈನ್ ವಾರಿಯರ್ಸ್‌ ಎಂದು ಪರಿಗಣಿಸಿ, ವಿಮೆ ಸೌಲಭ್ಯ ಘೋಷಿಸಬೇಕು. ಇಲ್ಲವಾದರೆ ಸೇವೆಗೆ ಬರುವುದಿಲ್ಲ ಎಂದು ಕೆಲವರು ಹಠ ಹಿಡಿದ್ದಾರೆ ಎಂದು ಸಿಡಿಪಿಒ ಸಿಂಗಾರೆವ್ವ ವಂಟಮೂರಿ ಸಭೆಯಲ್ಲಿ ಮಾಹಿತಿ ನೀಡಿದರು.

ಕರೊನಾ ನಿಯಂತ್ರಣ ಹಾಗೂ ಲಾಕ್‌ಡೌನ್‌ನಿಂದಾಗಿ ರಾಜ್ಯದ ನೇಕಾರರು ಅತಂತ್ರರಾಗಿದ್ದಾರೆ. ನೇಯ್ಗೆ ಮಗ್ಗಗಳು ಸ್ಥಗಿತಗೊಂಡಿದ್ದು, ಉತ್ಪಾದನೆಗೆ ಕಚ್ಚಾ ಸಾಮಗ್ರಿ ಸಿಗುತ್ತಿಲ್ಲ. ಸೀರೆಗಳು ಮಾರಾಟವಾಗದೆ ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಘೋಷಣೆ ಮಾಡಿದ 1,250 ಕೋಟಿ ರೂ. ಪ್ಯಾಕೇಜ್ ವ್ಯಾಪ್ತಿಗೆ ನೇಕಾರ ಸಮುದಾಯವನ್ನು ಪರಿಗಣಿಸಬೇಕು.| ಮಹಾದೇವಪ್ಪ ಯಾದವಾಡ ಶಾಸಕರಾಮದುರ್ಗ ಬಿಸಿಎಂ ವಸತಿ ನಿಲಯ, ಕಟಕೋಳದಲ್ಲಿ 70 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸಿದ್ಧಗೊಂಡಿದೆ. ಸೋಂಕಿತರ ಮನವೊಲಿಸಿ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು.| ಮಲ್ಲಿಕಾರ್ಜುನ ಹೆಗ್ಗಣ್ಣವರ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net