ಜಲ್ಲಿಗೇರಿ ತಾಂಡಾ ಸಮಸ್ಯೆಗೆ ಶೀಘ್ರ ಮುಕ್ತಿ

7srt-2
Published on

ಶಿರಹಟ್ಟಿ: ಮಳೆ ನೀರಿನಿಂದ ಸದಾ ತೊಂದರೆ ಅನುಭವಿಸುತ್ತಿದ್ದ ತಾಲೂಕಿನ ಪ್ರವಾಹ ಪೀಡಿತ ಜಲ್ಲಿಗೇರಿ ತಾಡಾದ ಅಭಿವೃದ್ಧಿಗೆ ಶುಕ್ರದೆಸೆ ಕೂಡಿ ಬಂದಿದೆ.

ಅಲ್ಪ ಮಳೆಯಾದರೆ ಸಾಕು ಗುಡ್ಡದ ಮೇಲಿನಿಂದ ಹರಿದು ಬರುವ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಉಂಟು ಮಾಡುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ತಾಂಡಾ ಅಭಿವೃದ್ಧಿ ನಿಗಮ ನಿರ್ಣಯ ಕೈಗೊಂಡಿದೆ.

ಕೆಲ ದಿನಗಳ ಹಿಂದೆ ಭಾರಿ ಮಳೆಯಾಗಿದ್ದರಿಂದ ಊರಿನ ಮನೆಗಳಲ್ಲಿ ನೀರು ನುಗ್ಗಿ ಜನ, ಜಾನುವಾರುಗಳು ತೊಂದರೆ ಅನುಭವಿಸುವಂತಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ್ದ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀವ, ನಿಗಮದ ನಿರ್ದೇಶಕ ಭರತ ನಾಯಕ ಹಾಗೂ ಶಾಸಕ ರಾಮಣ್ಣ ಲಮಾಣಿ ಅವರು ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಂಡಳಿಯ ಸಭೆಯಲ್ಲಿ ರಾಜೀವ ಅವರು ಪ್ರವಾಹ ಪೀಡಿತ ಜಲ್ಲಿಗೇರಿ ತಾಂಡಾದ ಸಮಸ್ಯೆ ಬಗ್ಗೆ ರ್ಚಚಿಸಿದ್ದರು. ಹೀಗಾಗಿ ತಾಂಡಾಕ್ಕೆ ಅಗತ್ಯವಿರುವ ಮೂಲ ಸೌಲಭ್ಯ ಕಲ್ಪಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ ನಾಯಕ, ‘ಜಲ್ಲಿಗೇರಿ ತಾಂಡಾದಲ್ಲಿ ರಾಜ ಕಾಲುವೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುತ್ತದೆ. ಅದಕ್ಕಾಗಿ ಅನುದಾನದ ಬಗ್ಗೆ ನೀಲಿ ನಕ್ಷೆ ಸಿದ್ಧಪಡಿಸಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲು ಪಿಡಬ್ಲುಡಿ ಇಲಾಖೆ ಇಂಜಿನಿಯರ್​ಗೆ ಸೂಚಿಸಲಾಗಿದೆ. ಶೀಘ್ರವೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಅನುಮೋದನೆ ಪಡೆದು ಕೆಲಸ ಆರಂಭಿಸಲಾಗುತ್ತದೆ. ಈ ಬಗ್ಗೆ ನಿಗಮದ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡಿದ್ದು, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದ್ದಾರೆ.

ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ‘ತಾಂಡಾ ಅಭಿವೃದ್ಧಿಗೆ ನಿಗಮವು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಈ ಬಗ್ಗೆ ನಾನು ಕೂಡ ಸಂಬಂಧಿಸಿದ ಸಚಿವರು ಹಾಗೂ ಮುಖ್ಯಮಂತ್ರಿಯ ಗಮನ ಸೆಳೆದು ಅಗತ್ಯ ಅನುದಾನ ತರಲು ಶ್ರಮಿಸುತ್ತೇನೆ’ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net