

ಚಾಮರಾಜನಗರ: ಫೆಂಗಲ್ ಚಂಡಮಾರುತದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜಿಲ್ಲೆಯ ಅವಳಿ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ.
ಜಿಲ್ಲೆಯಲ್ಲಿ ಅಟ್ಟಗೂಳಿಪುರ ಸಮೀಪದಲ್ಲಿರುವ ಸುವರ್ಣಾವತಿ ಜಲಾಶಯ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭರ್ತಿಯಾಗಿದ್ದು, ಮತ್ತೊಂದು ಚಿಕ್ಕ ಹೊಳೆ ಜಲಾಶಯಕ್ಕೂ ಹೊಳ ಹರಿವು ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲೂ ಮಳೆ ಇದೇ ರೀತಿಯಲ್ಲಿ ಸುರಿದರೇ ಚಿಕ್ಕ ಹೊಳೆ ಜಲಾಶಯವೂ ಭರ್ತಿಯಾಗುವ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ 2455 ಅಡಿ ಇದ್ದು, ಪ್ರಸ್ತುತ ನೀರು ಶೇಖರಣಾ ಮಟ್ಟ 2454.6 ಅಡಿ ಇದೆ. ಆಗಾಗಿ ಜಲಾಶಯ ಭರ್ತಿಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಜಲಾಶಯದಿಂದ ನೀರನ್ನು ಬಿಡಲಾಗಿದೆ.
ಇನ್ನು ಚಿಕ್ಕಹೊಳೆ ಜಲಾಶಯದ ಗರಿಷ್ಠ ಮಟ್ಟ 2274 ಅಡಿ ಇದ್ದು, ಪ್ರಸ್ತುತ 2271 ಅಡಿ ಇದೆ. ಮುಂದಿನ ದಿನಗಳಲ್ಲಿ ಈಗೆಯೇ ಮಳೆ ಮುಂದುವರಿದದ್ದೇ ಆದರೇ ಚಿಕ್ಕ ಹೊಳೆ ಜಲಾಶಯವೂ ಭರ್ತಿಯಾಗುವ ಸಾಧ್ಯತೆಗಳು ಇದೆ. ಒಂದೆಡೆ ಜಿಲ್ಲೆಯ ಅವಳಿ ಜಲಾಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೇ, ಮತ್ತೊಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
150 ಕ್ಯೂಸೆಕ್ ನೀರು ಹೊರಕ್ಕೆ:ಫೆಂಗಲ್ ಚಂಡಮಾರುತದ ಪರಿಣಾಮವಾಗಿ ತಮಿಳುನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ದಿಂಬಂ ಮತ್ತು ಇನ್ನಿತರೆ ಅರಣ್ಯ ಪ್ರದೇಶದಲ್ಲೂ ನಿರಂತರವಾಗಿ ವ್ಯಾಪಕ ಮಳೆಯಾಗುತ್ತಿದ್ದು, 2 ದಿನಗಳಿಂದ ಸುವರ್ಣಾವತಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಸೋಮವಾರವೂ ಮಳೆ ಮುಂದುವರಿದ ಪರಿಣಾಮವಾಗಿ ಬೆಳಗ್ಗೆ 150 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಶಾಸಕರಿಂದ ಬಾಗಿನ ಅರ್ಪಣೆ: ಸುವರ್ಣಾವತಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಬಾಗಿನ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಎಂದಿಗೂ ನೀರಿನ ಸಮಸ್ಯೆ ಆಗುವುದಿಲ್ಲ. ಪುಟ್ಟನಪುರ ಕೆರೆ, ಸರಗೂರುಮೋಳೆ ಕೆರೆ, ಕಾಗಲವಾಡಿಕೆರೆ, ಬಂಡಿ ಕೆರೆ, ಚಿಕ್ಕ ಮೋಳೆ, ದೊಡ್ಡಮೋಳೆ ಒಳಗೊಂಡಂತೆ 20 ಕೆರೆಗಳು ಬರುತ್ತದೆ. ಅವುಗಳಿಗೆ ಕಬಿನಿಯಿಂದ ನೀರು ತುಂಬಿಸಲಾಗುತ್ತದೆ. ಸುವರ್ಣಾವತಿ ಭರ್ತಿಯಾದರೆ ಸಿದ್ದಯ್ಯನಪುರ, ಹೊಂಗಲವಾಡಿ ಭಾಗಗಳಿಗೆ ಅನುಕೂಲವಾಗಲಿದೆ ಎಂದರು. ಸುವರ್ಣಾವತಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ಕಾವೇರಿ ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಜಯರಾಮ್, ಸಹಾಯಕ ఇంజినిಯರ್ ಕೆ.ಎಸ್.ಮಹೇಶ್, ಮುಖಂಡ ಗೋವಿಂದರಾಜು, ಕುಮಾರ್ ನಾಯಕ್, ಅಬ್ದಲ್ ಅಜೀಜ್ ದೀನಾ ಇತರರುಹಾಜರಿದ್ದರು.