ಯಾದಗಿರಿ: ಚಿತ್ತಾಪುರ ರಸ್ತೆ ಕಾಡ್ಲೂರ ಪೆಟ್ರೋಲ್ ಪಂಪ್ ಎದುರಿನ ವಿಶ್ವಾರಾಧ್ಯ ಕಾಲನಿಯಲ್ಲಿ ಸ್ವಯಂ ಕೆರೆ ನಿರ್ಮಾಣಗೊಂಡಿದೆ. ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ಇಡೀ ಬಡಾವಣೆ ಜಲಾವೃತಗೊಂಡಿದ್ದು, ಸಣ್ಣದೊಂದು ಕೆರೆಯಂತಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಹೀಗೆ ಅಪಾರ ಪ್ರಮಾಣದ ಮಳೆ ನೀರು ಬಡಾವಣೆಯ ಎಲ್ಲೆಂದರಲ್ಲಿ ಸಂಗ್ರಹವಾಗುವ ಮೂಲಕ ಸುಮಾರು ಒಂದು ತಿಂಗಳವರೆಗೂ ನೀರು ನಿಂತು ಅದು ಹಾಸುಗಟ್ಟಿ,ಅದಕ್ಕೆ ಚರಂಡಿ ನೀರು ಸೇರಿ ಇಡೀ ಕಾಲನಿ ಗಬ್ಬೆದ್ದು ನಾರುವ ಕೆಟ್ಟ ವಾಸನೆ ಹಬ್ಬುತ್ತದೆ.
ಈ ನೀರಿನಿಂದ ಸೊಳ್ಳೆ, ನೊಣಗಳ ಕಾಟ ಅತಿಯಾಗಿದ್ದು, ಹಾವು, ಚೇಳುಗಳು ಸಹ ಎಲ್ಲೆಂದರಲ್ಲಿ ಕಾಣುತ್ತಿವೆ. ಬಡಾವಣೆಯಲ್ಲಿ ಒಳಚರಂಡಿ, ಚರಂಡಿ, ಉತ್ತಮ ರಸ್ತೆ, ಕುಡಿಯುವ ನೀರಿನ ಸೌಲಭ್ಯ ಇವತ್ತಿಗೂ ಇಲ್ಲ. ಬಡಾವಣೆ ಹುಟ್ಟಿಕೊಂಡು ೧೫ ವರ್ಷವಾದರೂ ಇಲ್ಲಿ ಕನಿಷ್ಠ ಮೂಲ ಸೌಲಭ್ಯಕ್ಕಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿನ ಸಮಸ್ಯೆ ಬಗ್ಗೆ ನಗರಸಭೆ ತಾಳಿರುವ ದಿವ್ಯ ನಿರ್ಲಕ್ಷÈಕ್ಕೆ ಇಲ್ಲಿ ವಾಸ ಮಾಡುತ್ತಿರುವ ಸಾವಿರಾರು ಜನರು ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಸುಮಾರು ೧೦೦ಕ್ಕೂ ಹೆಚ್ಚು ಮನೆಗಳಿವೆ. ೭೦೦ಕ್ಕೂ ಅಧಿಕ ಜನರು ವಾಸ ಮಾಡುತ್ತಾರೆ. ಈ ಮಳೆ ನೀರು ಸಂಗ್ರಹದಿAದ ತಿರುಗಾಡಲು ಆಗುತ್ತಿಲ್ಲ. ದಿನದ ೨೪ ತಾಸು ದುರ್ವಾಸನೆ ಮೂಗಿಗೆ ರಾಚಿ, ಆರೋಗ್ಯ ಹಾಳಾಗುತ್ತಿದೆ.
ಬಿದ್ದ ಮಳೆ ನೀರು ಮುಂದೆ ಹರಿದು ಹೋಗಲು ದಾರಿನೇ ಇಲ್ಲ. ಚರಂಡಿ ಇಲ್ಲದ ಕಾರಣ ಅಲ್ಲಿಯೇ ತಿಂಗಳುಗಟ್ಟಲೆ ಜಮೆಯಾಗುತ್ತದೆ. ಇದರಲ್ಲಿ ಎಮ್ಮೆ, ಸೇರಿ ವಿವಿಧ ಜಾನುವಾರುಗಳು ಬಂದು ಅಲ್ಲಿಯೇ ಬೆಳಗ್ಗೆಯಿಂದ ಸಂಜೆಯವರೆಗೆ ಠಿಕಾಣಿ ಹೂಡುತ್ತವೆ. ಇದರಿಂದಾಗಿಯೂ ಸಹ ಜನರ ಆರೋಗ್ಯ ಕೆಡುತ್ತಿದೆ.
ನಗರಸಭೆ ವ್ಯಾಪ್ತಿಗೆ ವಿಶ್ವಾರಾಧ್ಯ ಕಾಲನಿ ಬರುತ್ತದೆ. ಇಲ್ಲಿ ಎಲ್ಲವೂ ನಗರಸಭೆ ನಿಯಮಗಳ ಪ್ರಕಾರವೆ ಮನೆಗಳ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ತೆರಿಗೆ ಕಟ್ಟಲಾಗುತ್ತಿದೆ. ಆದರೂ ಸೌಲಭ್ಯ ಮಾತ್ರ ಮರಿಚಿಕೆಯಾಗಿವೆ.
ಯಾದಗಿರಿ ನಗರದ ವಿಶ್ವಾರಾಧ್ಯ ಕಾಲನಿಯಲ್ಲಿ ಮಳೆ ನೀರಿನಿಂದ ಜಲಾವೃತಗೊಂಡ ಪ್ರದೇಶ.