

ಭಾಲ್ಕಿ: ತಾಲೂಕಿನ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಗೀಡಾದ ಪ್ರದೇಶಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು.
ಗಡಿಭಾಗದ ಲಂಜವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಕನಾಳ ಸೇರಿದಂತೆ ಮುಂತಾದ ಕಡೆಗಳಿಗೆ ಭೇಟಿ ನೀಡಿದ ಅವರು ಸೋಯಾ, ಅವರೆ, ತೊಗರಿ ಸೇರಿ ಮತ್ತಿತರ ಬೆಳೆಹಾನಿ ವೀಕ್ಷಿಸಿ ರೈತರ ಸಂಕಷ್ಟ ಆಲಿಸಿದರು.
ನಂತರ ಜಲಾವೃತಗೊಂಡ ಲಖಣಗಾಂವ ಮತ್ತು ಇಂಚೂರ ಸೇತುವೆಗೆ ಭೇಟಿ ನೀಡಿ ಸೇತುವೆ ಮೇಲಿಂದ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದರು.
ಸಮೀಕ್ಷೆ ಪರಿಶೀಲನೆ : ಮಳೆಹಾನಿ ಮಾಹಿತಿ ಪಡೆಯುವುದರ ಜತೆಗೆ ಲಖಣಗಾಂವ ಗ್ರಾಮಕ್ಕೆ ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಸಮೀಕ್ಷೆದಾರರು ಕೈಗೊಳ್ಳುತ್ತಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸಮೀಕ್ಷೆ ಪರಿಶೀಲಿಸಿ, ಸಮೀಕ್ಷೆದಾರರಿಂದ ತಾಂತ್ರಿಕ ತೊಡಕು ಆಗುತ್ತಿರುವ ಬಗ್ಗೆ ಮಾಹಿತಿ ಪಡೆದರು.
ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ತಾಲೂಕು ಪಂಚಾಯಿತಿ ಇಒ ಅಧಿಕಾರಿ ಸೂರ್ಯಕಾಂತ ಬಿರಾದಾರ, ಲೋಕೋಪಯೋಗಿ ಇಲಾಖೆಯ ಎಇಇ ಅಲ್ತಾಫ್, ಪಿಡಿಒ ಬಲಭೀಮ, ಭಾತಂಬ್ರಾ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು, ಇಂಚೂರ ಹಾಗೂ ಲಂಜವಾಡ ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.