

ಕಲಬುರಗಿ: ಪ್ರಸ್ತುತ ಬರ ಇಡೀ ವಿಶ್ವವನ್ನೇ ಕಾಡುತ್ತಿದೆ. ನೀರಿಗಾಗಿ ಯುದ್ಧ ನಡೆಯುತ್ತಿದೆ. ಆದರೆ ಅದನ್ನು ಧರ್ಮದ ಯುದ್ಧ ಎಂದು ಬಿಂಬಿಸಲಾಗುತ್ತಿದೆ. ಆದ್ದರಿಂದ ಎಲ್ಲೆಡೆ ಜಲಸಾಕ್ಷರತೆ ಮೂಡಿ, ಜನರು ಜಾಗೃತರಾಗಿ ಜಲಸಂರಕ್ಷಣೆ ಮಾಡಿದರೆ ಬರ ನೀಗಲಿದೆ ಎಂದು ಜಲತಜ್ಞ, ವಾಟರ್ ಮ್ಯಾನ್ ಆಫ್ ಇಂಡಿಯಾ ರಾಜೇಂದ್ರಸಿಂಗ್ ಆಶಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ತೀವ್ರ ಬರದ ಸ್ಥಿತಿ ಇದೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ನೀರಿನ ಅಭಾವ ತಲೆದೂರಿದೆ. ಆಫ್ರಿಕಾ, ಏಷಿಯಾ ದೇಶಗಳಂತ ಗಂಭೀರ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಿದೆ. ಆದರೆ ಈ ಭಾಗದ ಜನರು ಜಾಗೃತರಾಗಿ ಮಳೆಯ ನೀರು, ಇರುವ ನೀರನ್ನು ಸಮರ್ಪಕವಾಗಿ ನಿಯಂತ್ರಿಸದೇ ಇರುವುದರಿಂದ ಸ್ಥಿತಿ ದಿನೇ ದಿನೆ ಗಂಭೀರವಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಏಳು ಜಿಲ್ಲೆಗಳಲ್ಲಿ ಮಳೆ ನೀರು ಯಥೇಚ್ಛವಾಗಿ ಇದೆ. ಅದನ್ನು ಹಿಡಿದಿಟ್ಟು ಸಂರಕ್ಷಿಸಿ, ಅಂತರ್ಜಲ ವೃದ್ಧಿ, ಮರುಪೂರಣ ಯೋಜನೆಗಳನ್ನು ಮಾಡಬೇಕು. ಇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಡಿಮೆ ನೀರಿನಲ್ಲಿ ಬದುಕುವ ಛಲ ಮೂಡಬೇಕು. ಆಗ ಮಾತ್ರ ಈ ಭಾಗದಲ್ಲಿನ ಬರ ನಿಯಂತ್ರಿಸಬಹುದು ಎಂದರು. ಪ್ರಮುಖರಾದ ಹಣಮಂತ ಭುಸನೂರ ಇದ್ದರು.
ನದಿಯನ್ನು ಕೊಲ್ಲುತ್ತದೆ ಡ್ಯಾಂ ಬೇಕಿದೆ ಮಳೆ ಆಧಾರಿತ ಬೆಳೆ: ಪ್ರಸ್ತುತ ಎಲ್ಲ ಜನಪ್ರತಿನಿಧಿಗಳು, ಕಾನೂನು ರೂಪಿಸುವವರು, ಅಧಿಕಾರದಲ್ಲಿರುವವರು ದೊಡ್ಡ ದೊಡ್ಡ ಡ್ಯಾಂ ಕಟ್ಟಲು ಯೋಚಿಸುತ್ತಾರೆ. ಇದು ತಪ್ಪು ಪ್ರಕ್ರಿಯೆಯಾಗಿದೆ. ದೊಡ್ಡ ಡ್ಯಾಂಗಳಿಂದ ನೀರಿನ ಇಂಗುವಿಕೆಗೆ ತಡೆ ಬೀಳಲಿದೆ. ಅಂತರ್ಜಲ ಕುಸಿಯಲಿದೆ. ನದಿಗಳನ್ನು ಇದು ಕೊಲೆ ಮಾಡುತ್ತದೆ. ಅಲ್ಲದೆ ನಮ್ಮಲ್ಲಿ ಮಳೆ ಆಧಾರಿತ ಬೆಳೆಗಳನ್ನು ಬೆಳೆಯಬೇಕು. ಅದನ್ನು ಬಿಟ್ಟು ಕಬ್ಬು, ಭತ್ತ ಎಂದು ಹೆಚ್ಚು ನೀರು ಬೇಡುವ ಬೆಳೆ ಬೆಳೆದು ಹೈರಾಣಾಗುತ್ತಿದ್ದೇವೆ. ಈ ಕುರಿತು ಚಿಂತನೆ ಮಾಡಬೇಕು ಎಂದು ಡಾ.ರಾಜೇಂದ್ರ ಸಿಂಗ್ ಹೇಳಿದರು.