

ಮೈಸೂರು: ಭ್ರೂಣ ಲಿಂಗ ಪತ್ತೆ ಪ್ರಕರಣ ಬಹಿರಂಗವಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸ್ಕಾೃನಿಂಗ್ ಸೆಂಟರ್, ಕ್ಲಿನಿಕ್‌ಗಳ ತಪಾಸಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜತೆಗೆ, ಆರೋಗ್ಯ, ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಜಂಟಿ ಕಾರ್ಯಪಡೆ ಸ್ಥಳ ಪರಿಶೀಲನೆ ನಡೆಸಿ ಲೋಪ ಕಂಡುಬಂದಾಗ ತಕ್ಷಣ ಕ್ರಮ ವಹಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣ ಸದ್ದು ಮಾಡಿತು. ಈ ಕುರಿತು ಸುದೀರ್ಘವಾದ ಚರ್ಚೆ ನಡೆಸಿದ ಬಳಿಕ ವಿವಿಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಅನುಮತಿ ಪಡೆದಿರುವ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಮಾರ್ಗಸೂಚಿ ಅನ್ವಯ ಸ್ಕ್ಯಾನಿಂಗ್ ನಡೆಸಲಾಗುತ್ತಿದೆಯೇ? ಪಾಲಕರು, ತಾಯಿ ಹೊರತು ಅನ್ಯ ವ್ಯಕ್ತಿಗಳ ಪತ್ತೆಗಾಗಿ ಅಲ್ಲಿಯ ಸಿಸಿ ಕ್ಯಾಮರಾ ಪರಿಶೀಲನೆ ಮಾಡಬೇಕು. ಆಯುರ್ವೇದ, ಹೋಮಿಯೋಪಥಿ ಹೆಸರಿನಲ್ಲಿ ಅನುಮತಿ ಪಡೆದು ಅಲೋಪಥಿ(ಇಂಗ್ಲಿಷ್ ಔಷಧ ಪದ್ಧತಿ) ಚಿಕಿತ್ಸೆ ನೀಡುತ್ತಿರುವ ಕುರಿತು ಸಹ ಪರಿಶೀಲನೆ ಮಾಡಬೇಕು. ಈ ಬಗ್ಗೆ ಅಗತ್ಯ ಮಾಹಿತಿಯೊಂದಿಗೆ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ 386 ಸ್ಕಾೃನಿಂಗ್ ಸೆಂಟರ್‌ಗಳಿದ್ದು, ಭ್ರೂಣ ಲಿಂಗ ಪತ್ತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಉದಯಗಿರಿ ಮುಖ್ಯರಸ್ತೆಯಲ್ಲಿರುವ ಕ್ಲಿನಿಕ್ ಪರಿಶೀಲನೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ಕೆಪಿಎಂಇ ಕಾಯ್ದೆ ನೋಂದಣಿ ಮಾಡಿಸಲು ಅರ್ಜಿ ಸಲ್ಲಿಸಿದ್ದು, ತಾಲೂಕು ಅಧಿಕಾರಿಗಳು ಪರಿಶೀಲನೆಗೆ ಹೋದಾಗ ಬಾಗಿಲು ಹಾಕಿತ್ತು. ಮಾಲೀಕರನ್ನು ವಿಚಾರಿಸಿದಾಗ ನಾಲ್ಕು ತಿಂಗಳ ಬಾಡಿಗೆ ಪಾವತಿಸಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು, ಅಧಿಕಾರಿಗಳ ಗಮನಕ್ಕೆ ಬಾರದೆ ಸ್ಕಾೃನಿಂಗ್ ಕೇಂದ್ರ ನಡೆದಿದೆಯೇ ಎನ್ನುವುದು ಪರಿಶೀಲನೆ ಮಾಡಬೇಕು. ಆಯುರ್ವೇದ, ಹೋಮಿಯೋಪಥಿ ಚಿಕಿತ್ಸೆ ಫಲಕ ಹಾಕಿಕೊಂಡು ಅಲೋಪಥಿ ಚಿಕಿತ್ಸೆ ನೀಡುತ್ತಾರೆ. ಈ ಬಗ್ಗೆ ಗಮನಹರಿಸಿಲ್ಲವೇ? ಎಂದು ಪ್ರಶ್ನಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾದ್ಯಂತ ಸ್ಕ್ಯಾನಿಂಗ್ ಸೆಂಟರ್, ಕ್ಲಿನಿಕ್‌ಗಳನ್ನು ತಪಾಸಣೆ ಮಾಡಲು ಸೂಚನೆ ನೀಡಲಾಗಿದೆ. ಆರೋಗ್ಯ ಇಲಾಖೆ, ಆಯುರ್ವೇದ ಇಲಾಖೆ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಜಂಟಿಯಾಗಿ ಪ್ರತಿಯೊಂದು ಸೆಂಟರ್, ಕ್ಲಿನಿಕ್‌ಗೆ ತೆರಳಿ ಕೆಪಿಎಂಇ ಕಾಯ್ದೆ ನೋಂದಣಿ ಮಾಡಿಸಿಕೊಂಡಿದ್ದಾರೆಯೇ, ಚಿಕಿತ್ಸೆ ನೀಡುವ ವೈದ್ಯರು ಪದವಿ ಪಡೆದಿದ್ದಾರೆಯೇ? ಮಾಲೀಕರಿಂದ ಬಾಡಿಗೆ ಕರಾರು, ಟ್ರೇಡ್ ಲೈಸೆನ್ಸ್ ಪಡೆಯಲಾಗಿದೆಯೇ ಮತ್ತು ಆಯುರ್ವೇದ ಚಿಕಿತ್ಸೆ ನೀಡಲು ನೋಂದಣಿಯಾಗಿ ಅಲೋಪಥಿ ಚಿಕಿತ್ಸೆ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ಪ್ರದರ್ಶಿಸಬೇಕು. ಕಾನೂನುಬಾಹಿರವಾಗಿ ನಡೆಯುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಉದಯಗಿರಿ ಮುಖ್ಯ ರಸ್ತೆಯಲ್ಲಿರುವ ಮಾತಾ ಕ್ಲಿನಿಕ್‌ನ ಕಟ್ಟಡಕ್ಕೆ ಸಂಬಂಧಿಸಿದಂತೆ ಟ್ರೇಡ್ ಲೈಸೆನ್ಸ್ ಪಡೆಯಲಾಗಿದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸದ ಪಾಲಿಕೆ ವಲಯ ಆಯುಕ್ತರ ವಿರುದ್ಧ ಜಿಲ್ಲಾಧಿಕಾರಿ ಅಸಮಾಧಾನವ್ಯಕ್ತಪಡಿಸಿದರು.
ಒಂದು ಕ್ಲಿನಿಕ್ ಸ್ಥಾಪನೆ ಮಾಡುವ ಮುನ್ನ ಪಾಲಿಕೆಯಿಂದ ಅನುಮತಿ ಪಡೆಯಬೇಕು. ವಲಯ ಆಯುಕ್ತರು, ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಟ್ಟಡದಲ್ಲಿ ಈ ರೀತಿ ಕ್ಲಿನಿಕ್ ಆರಂಭಕ್ಕೂ ಮುನ್ನ ಟ್ರೇಡ್ ಲೈಸೆನ್ಸ್ ಪಡೆಯಬೇಕು. ಇದಲ್ಲದೆ, ಕೊಡುವಾಗ ಕೆಪಿಎಂಇ ಕಾಯ್ದೆಯಡಿ ನೋಂದಣಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳದೆ ಇರುವುದಕ್ಕೆ ಕಿಡಿಕಾರಿದರು.
ಜಿಲ್ಲೆಯಲ್ಲಿರುವ ಕ್ಲಿನಿಕ್, ಸ್ಕ್ಯಾನಿಂಗ್ ತಪಾಸಣೆ ಮಾಡುವಾಗ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಜರಿದ್ದು, ಟ್ರೇಡ್ ಲೈಸೆನ್ಸ್ ಪಡೆದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದರು.