

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ: ಜಲಮೂಲಗಳಿಗೆ ಕಾಯಕಲ್ಪ ದೊರಕಿಸಿಕೊಡುವ ನಿಟ್ಟಿನಲ್ಲಿ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಬಿರುಸಿನ ಕಾಮಗಾರಿಗೆ ಒತ್ತು ನೀಡಿದೆ. ಸಾಂಪ್ರದಾಯಿಕ ಜಲಮೂಲ ರಕ್ಷಣೆಗಾಗಿ 2019ರ ಆಗಸ್ಟ್‌ನಲ್ಲಿ ಜಾರಿಯಾದ ಸರ್ಕಾರದ ಮಹಾತ್ವಾಕಾಂಕ್ಷಿ ‘ಜಲಾಶಕ್ತಿ-ಜಲಾಮೃತ ಅಭಿಯಾನ’ ಜಿಲ್ಲೆಯಲ್ಲಿ ಚುರುಕು ಪಡೆದಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಜಲಮೂಲಗಳ ಪುನಶ್ಚೇತನ ಕಾರ್ಯ ಬಿರುಸಿನಿಂದ ಸಾಗಿದೆ. ಕೆರೆ-ಕುಂಟೆಗಳ ಹೂಳೆತ್ತುವುದು, ಸಸಿ ನೆಡುವುದು, ಕೆರೆಗಳಲ್ಲಿನ ಜಾಲಿಮರಗಳ ತೆರವು, ಕಲ್ಯಾಣಿಗಳ ಸ್ವಚ್ಛತೆ, ಬದು ನಿರ್ಮಾಣ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಸಂಪ್ರದಾಯಿಕ ಜಲಮೂಲಗಳ ರಕ್ಷಣೆಗೆ ಜಿಪಂ ಒತ್ತು ನೀಡಿದೆ. ಜಲರಕ್ಷಣೆ ಧ್ಯೇಯ: ಸತತ ಬರಗಾಲ ಎದುರಿಸುತ್ತಿರುವ ರಾಜ್ಯಗಳಲ್ಲಿ ಜಲಮೂಲ ಸಂರಕ್ಷಸುವ ಉದ್ದೇಶದಿಂದ 2019ನೇ ವರ್ಷವನ್ನು ಜಲವರ್ಷ ಎಂದು ಸರ್ಕಾರ ಘೋಷಣೆ ಮಾಡಿದೆ. ಅದರನ್ವಯ ರಾಜ್ಯದಲ್ಲಿ ಈಗಾಗಲೇ ಅಭಿಯಾನಕ್ಕೆ ಚಾಲನೆ ದೊರೆತಿದೆ. ನೀರಿನ ಕಡಿಮೆ ಬಳಕೆ, ಅಂತರ್ಜಲಮಟ್ಟ ಸುಧಾರಣೆ, ಮಳೆನೀರು ಅರಣ್ಯೀಕರಣ ಹಾಗೂ ಸಾಂಪ್ರದಾಯಿಕ ಜಲಮೂಲಗಳ ರಕ್ಷಣೆಗೆ ಹೀಗೆ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಜಲಾಮೃತ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ‘ಹನಿ ನೀರನ್ನೂ ಉಳಿಸಿ ಮುಂದಿನ ಪೀಳಿಗೆಗೆ ನೀಡುತ್ತೇವೆ’ ಎಂಬುದು ಜಲಾಮೃತ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯಾಗಿದೆ. ಬರ ಪರಿಸ್ಥಿತಿ ಎದುರಿಸಲು ಪೂರ್ವ ಯೋಜನೆ: ರಾಜ್ಯದಲ್ಲಿನ ಬರ ಪರಿಸ್ಥಿತಿ ಎದುರಿಸಲು ಜಲಾಮೃತ ಯೋಜನೆಯಡಿ ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಮತ್ತು ಹಸರೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು 2 ಸಾವಿರಕ್ಕೂ ಹೆಚ್ಚು ಕಾಮಗಾರಿ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಪಂ, ತಾಪಂ ಹಾಗೂ ಜಿಪಂ ಸಮನ್ವಯತೆಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ನೀರಿನ ಸೆಲೆ ಪುನರುಜ್ಜೀವನಗೊಳಿಸುವ ಯೋಜನೆ ರೂಪುಗೊಂಡಿದೆ. ಎಲ್ಲರ ಸಹಕಾರದಿಂದ ಯಶ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಜಲಾಮೃತ ಅಭಿಯಾನ ಚಾಲನೆಗೊಂಡಿದ್ದು, ತಾಲೂಕುಮಟ್ಟದ ಎಲ್ಲ ಗ್ರಾಪಂ ಪಿಡಿಒಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಬಿಲ್ಕಲೆಕ್ಟರ್, ಕಂಪ್ಯೂಟರ್ ಆಪರೇಟರ್ ಪಾಲ್ಗೊಳ್ಳುತ್ತಿದ್ದಾರೆ. ಸ್ಥಳೀಯರ ಶ್ರಮದಾನದ ಮೂಲಕ ಜಲಾಮೃತ ಯೋಜನೆಯಡಿ ವಿವಿಧ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಯೋಜನೆ ಯಶಸ್ವಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಪಂನಿಂದ ಪ್ರಚಾರ: ಜಲಾಮೃತ ಕಾರ್ಯಕ್ರಮದ ಅನುಷ್ಠಾನಕ್ಕೆ ಮುಂದಾಗಿರುವ ಗ್ರಾಮಾಂತರ ಜಿಪಂ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಮುಖ್ಯವಾಗಿ ಜನರಲ್ಲಿ ನೀರಿನ ಮಿತ ಬಳಕೆ ಬಗ್ಗೆ ಅರಿವು ಮೂಡಿಸುವುದು, ಕರಪತ್ರ ಹಂಚಿಕೆ, ಆಟೋ ಅನೌನ್ಸ್‌ಮೆಂಟ್, ಮಳೆನೀರು ಕೊಯ್ಲು ಮಾಹಿತಿ, ಸಮುದಾಯ ಸಹಭಾಗಿತ್ವದಲ್ಲಿ ಕೆರೆಗಳ ಹೂಳು ತೆಗೆಯವುದು, ಸಸಿ ನೆಡುವುದು ಪ್ರತಿ ಕಾಮಗಾರಿಗಳಲ್ಲಿ ಸಂಪೂರ್ಣ ವಿವರವಿರುವ ಜಲಾಮೃತ ನಾಮಲಕ ಅಳವಡಿಸುವುದು ಮತ್ತಿತರ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಜಲಮೂಲ ರಕ್ಷಣೆ, ಅಭಿವೃದ್ಧಿ ಹಾಗೂ ಪುನರುಜ್ಜೀವ ಕಾರ್ಯಕ್ಕೆ ಒತ್ತು ನೀಡಲಾಗಿದೆ. ಅಮೃತ ಸಮಾನವಾದ ನೀರಿನ ರಕ್ಷಣೆಗಾಗಿ ಜಿಪಂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ. ಸಾರ್ವಜನಿಕರಿಂದಲೂ ಉತ್ತಮ ಸಹಕಾರ ಸಿಗುತ್ತಿದೆ. ಎನ್.ಎಂ.ನಾಗರಾಜ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಜಲಾಮೃತ ಯೋಜನೆ ಅನುಷ್ಠಾನಗೊಂಡಿದ್ದು, ನಿಗದಿತ ಗುರಿ ಸಾಧಿಸಲಾಗಿದೆ. ಇನ್ನು 15 ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಕೆ.ಕರಿಯಪ್ಪ, ಉಪ ಕಾರ್ಯದರ್ಶಿ ಜಿಪಂ