

ಕೋಲಾರ: ಜಲಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ತಿಳಿಸಿದರು.
ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ವಕೀಲರ ಸಂಘ, ಭಾರತೀಯ ವಿಜ್ಞಾನ ಸಂಸ್ಥೆ, ನಗರಸಭೆ ಸಹಯೋಗದಲ್ಲಿ ವಿಶ್ವಜಲ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕೋಲಾರಮ್ಮ ಕೆರೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಕೆರೆಗಳಿಗೆ ತ್ಯಾಜ್ಯ ಹಾಕಿ ಕಲುಷಿತಗೊಳಿಸುವುದನ್ನು ಕಾಣಬಹುದಾಗಿದೆ. ಇದರಿಂದ ಮುಂದೊಂದು ದಿನ ಕುಡಿಯಲು ಶುದ್ಧ ನೀರಿನ ಅಭಾವ ಎದುರಾಗಬಹುದು. ಈ ಸಾಮಾನ್ಯ ತಿಳಿವಳಿಕೆ ಎಲ್ಲರಲ್ಲೂ ಬರಬೇಕಿದೆ. ನಮ್ಮ ಹಿರಿಯರು ನಿರ್ಮಿಸಿರುವ ಕೆರೆಗಳನ್ನು ನಾಶ ಮಾಡದೆ ಸಂರಕ್ಷಿಸಲು ಪಣತೊಡೋಣ. ಕೆರೆಗಳನ್ನು ನಾಶಪಡಿಸಿದರೆ ಸಂಸತಿ ನಾಶವಾದಂತೆ ಎಂದರು.
ವಿಶ್ವ ಜಲದಿನ ಪ್ರಯುಕ್ತ ಕೆರೆ ಸ್ವಚ್ಛತೆ ಮಾಡುತ್ತಿರುವುದು ಮೆಚ್ಚುಗೆಯ ವಿಷಯ. ಇನ್ನು ಮುಂದಾದರೂ ಜನ ಕೆರೆಗೆ ಕಸ ಸುರಿಯುವುದನ್ನು ನಿಲ್ಲಿಸಬೇಕು. ಜಿಲ್ಲೆಯಲ್ಲಿ ನೀರಿಲ್ಲದೆ ಬರ ಪರಿಸ್ಥಿತಿ ಇತ್ತು. ಆದರೀಗ ಕೆಸಿವ್ಯಾಲಿ ನೀರು ಬರುತ್ತಿರುವುದರಿಂದ ಇರುವ ಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ಮುಂದೆ ಜಲ ಅಭಾವ ಎದುರಾಗದಂತೆ ಜಲ ಸಂರಕ್ಷಣೆ ಆಗಬೇಕು. ಕೆರೆಗಳ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಮುಂದಿನ ಪೀಳಿಗೆಯವರಿಗೆ ಕೆರೆಗಳನ್ನು ಉಳಿಸಬೇಕು. ಅಂತರ್ಜಲ ಮಟ್ಟ ಹೆಚ್ಚಾಗಲು ಕೆರೆಗಳು ಮುಖ್ಯ ಎಂದು ತಿಳಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಪಿ.ದೇವಮಾನೆ ಮಾತನಾಡಿ, ಪ್ರತಿಯೊಬ್ಬರೂ ನೀರನ್ನು ಸರಿಯಾದ ರೀತಿ ಉಪಯೋಗಿಸಬೇಕು. ಸಂವಿಧಾನದಲ್ಲಿ ತಿಳಿಸುವಂತೆ ಜಲವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಅದರಿಂದ ಉಳಿಸುವುದರಿಂದ ನಮ್ಮ ಆರೋಗ್ಯ ಮತ್ತು ಪರಿಸರ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಮಾತನಾಡಿ, ಜಿಲ್ಲೆಯಲ್ಲಿ ನೀರಿಗೆ ಅಭಾವ ಇದೆ. ಕೆರೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಬೇಕು. ನೀರನ್ನು ಅವಶ್ಯಕತೆ ಇದ್ದಷ್ಟು ಬಳಸಬೇಕು, ವ್ಯರ್ಥ ಮಾಡಿದರೆ ಮುಂದೊಂದು ದಿನ ವ್ಯಥೆ ಪಡಬೇಕಾಗುತ್ತದೆ. ಪ್ರಪಂಚದಲ್ಲಿ ಅತ್ಯಮೂಲ್ಯ ವಸ್ತು ನೀರು, ಅದನ್ನು ಉಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್, ಭಾರತೀಯ ವಿಜ್ಞಾನ ಸಂಸ್ಥೆಯ ನಾರಾಯಣ್, ವಕೀಲರ ಸಂಘದ ಕಾರ್ಯದರ್ಶಿ ರಘುಪತಿ ಗೌಡ, ವಕೀಲ ಜಗದೀಶ್ ಉಪಸ್ಥಿತರಿದ್ದರು.